Friday, July 23, 2010

ಹರಿಗುರುವಿಗೆ ನುಡಿಯ ನಮನ

ಇಂದು ಬೆಳಗ್ಗೆ ಎದ್ದು ವಿಜಯಕರ್ಣಾಟಕ ಪತ್ರಿಕೆಯ ಮೇಲೆ ಕಣ್ಣಾಡಿಸಿದಾಗ ಒಂದು ಸಖೇದಾಶ್ಚರ್ಯದ ಸಂಗತಿ ಕಾಣಿಸಿತು. ಹರಿಹರೇಶ್ವರರು ನಮ್ಮೊಂದಿಗಿಲ್ಲವೆಂಬ ಸುದ್ದಿ. ಗುರುವಾರ ರಾತ್ರಿ ಅವರು ನಿಧನರಾದರೆಂದು ಓದಿ ಮನಸ್ಸಿಗೆ ಬಹಳ ದುಃಖವಾಯ್ತು. ಅದರ ನಡುವೆಯೂ ಅವರ ನಗುಮೊಗ; ಕಾಳಜಿ ಮತ್ತು ಅಕ್ಕರೆಗಳು ನೆನಪಾದವು. ಹರಿಯವರೆಂದರೆ ಹಾಗೆ.

ಶಿಕಾರಿಪುರ ಹರಿಹರೇಶ್ವರರೆಂದರೆ ಅಮೇರಿಕೆಯಲ್ಲಿ ಸ್ವಲ್ಪಕಾಲವಾದರೂ ವಾಸಿಸಿದ್ದು ಕನ್ನಡ-ಸಂಸ್ಕೃತಿ ವಿಷಯಗಳಲ್ಲಿ ಆಸಕ್ತರಾಗಿದ್ದವರಿಗೆ ಎಂದಿಗೂ ಮರೆಯಲಾರದಂಥ, ಮರೆಯಬಾರದಂಥ ಹೆಸರು, ವ್ಯಕ್ತಿತ್ವ. ನನಗಂತೂ ಎಸ್.ಕೆ.ಹರಿಹರೇಶ್ವರರೆಂದರೆ - ಸ್ಟಾಕ್-ಟನ್ ಹರಿಹರೇಶ್ವರರು ಎಂದು ನೆನಪು ಬರುತ್ತಿತ್ತು. ಏಕೆಂದರೆ ಅಮೇರಿಕೆಯಲ್ಲಿದ್ದಾಗ ಅವರು ಕ್ಯಾಲಿಫೋರ್ನಿಯಾದ ಸ್ಟಾಕ್-ಟನ್ನಿನಲ್ಲಿ ಕುಟುಂಬಸಮೇತರಾಗಿ ವಾಸಿಸುತ್ತಿದ್ದರು. ಈ ಲೇಖನದ ಉದ್ದೇಶ ನಾ ಕಂಡ ಹರಿಯವರನ್ನು ನೆನಪಿಸಿಕೊಳ್ಳುವುದು. 

ಅವರ ಹೆಸರನ್ನು ಬಹಳೆಡೆ ಕೇಳಿದ್ದರೂ ಮುಖಪರಿಚಯವಾದದ್ದು ೨೦೦೦ ದ ಹ್ಯೂಸ್ಟನ್ನಿನ ವಿಶ್ವಕನ್ನಡಸಮ್ಮೇಳನದಲ್ಲಿ. ಭರ್ಜರಿಯಾದ ಸ್ಮರಣಸಂಚಿಕೆಯ ರೂವಾರಿಗಳು ಹರಿಯವರು. ನಗುಮೊಗದ ತಲ್ಲೀನತೆ ಅವರ ಗುರುತಾಗಿತ್ತು. ಏನೂ ಗೊತ್ತಿಲ್ಲದ ಪಡ್ಡೆಯ ಹುಡುಗರಾದ ನಮಗೂ "ನನ್ನ ಹೆಸರು ಹರಿಹರೇಶ್ವರ" ಎಂದು ನಗುವಿನೊಂದಿಗೆ ತಮ್ಮ ಪರಿಚಯವನ್ನು ನೀಡಿದ್ದರು. ಶ್ರೀರಾಮನ ಹಾಗೆ ಇವರು ಪೂರ್ವಭಾಷಿ. ಕನ್ನಡವೆಂದರೆ ಅವರಿಗೆ ಅಪಾರವಾದ ಒಲವೆಂದು ಆ ಕೆಲವು ಘಳಿಗೆಗಳ ಒಡನಾಟವು ತಿಳಿಸಿತ್ತು. ಅವರು ವೃತ್ತ್ಯಾ ವಿಜ್ಞಾನಿ-ತಂತ್ರಜ್ಞರಾಗಿದ್ದರೂ ಪ್ರವೃತ್ತ್ಯಾ ಸಾಹಿತಿಗಳು-ಬರಹಗಾರರು.
ಅವರಲ್ಲಿ ಚಳವಳಿಗಾರರೂ ಒಮ್ಮೊಮ್ಮೆ ಕಾಣಿಸುತ್ತಿದ್ದರು. ಕೈಗೆತ್ತಿಕೊಂಡ ಕೆಲಸವನ್ನು
ಮುಗಿಸುವ ಹಠ.

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಅದೆಷ್ಟು ಸ್ಮರಣ-ಸಂಚಿಕೆಗಳಿಗೆ ಇವರು ಸಂಪಾದಕರಾಗಿದ್ದರೋ! ಕೂಟದ ಪ್ರತಿಯೊಂದು ಕಾರ್ಯಕ್ರಮ ನಡೆದ ನಂತರ ಅದರ ವರದಿಯನ್ನು ಬರೆಯುವುದು ರೂಢಿಯಾಗಿತ್ತು. ಅಲ್ಪಸ್ವಲ್ಪ ಕನ್ನಡ ತಿಳಿದ ನನ್ನನ್ನು ನೋಡಿ ಹರಿಯವರು ಹುರಿದುಂಬಿಸಿ ಬರೆಹ ಬರೆಯಿಸಿದ್ದರು - ಅದೂ ಕನ್ನಡದಲ್ಲಿ. ಲೇಖನದ ನಂತರ ಒಳ್ಳೆಯ ಮಾತುಗಳನ್ನಾಡಿ ಪ್ರೋತ್ಸಾವನ್ನೂ ನೀಡಿದ್ದರು. ತೊದಲುವ ಮಗುವಿನ ನುಡಿಯನ್ನೂ ಅಕ್ಕರೆಯಿಂದ ಆಲಿಸಿ ತಿದ್ದಿ ಕಲಿಸಿ ನಂತರ "ಭೇಷ್ ! ಎಷ್ಟು ಚೆನ್ನಾಗಿ ಮಾಡಿದೆ" ಎಂದು ಹೊಗಳುವಂಥವರು ಹರಿಯವರು. ಮುಂದೆ ಒಂದಷ್ಟು ಬರೆದು ಕಳಿಸಿದ್ದೆ - ಅದನ್ನು ಹೊಗಳಿ ಅದಕ್ಕೆ ಒಳ್ಳೆಯ ಪ್ರಚಾರವನ್ನೂ ಪ್ರೋತ್ಸಾಹವನ್ನೂ ನೀಡಿದ್ದರು. ಅಕ್ಷರಮಾತ್ರವನ್ನು ಕಲಿಸಿದವರು ಗುರುಗಳಾದರೆ ನನಗೆ ಹರಿಯವರು ದೊಡ್ಡ ಗುರುಗಳು.

ನಂತರ ನನಗೆ ತಿಳಿದದ್ದೇನೆಂದರೆ ಹರಿಯವರು ಬರೆಯುವುದಕ್ಕಿಂತಲೂ ಬರೆಯಿಸುವುದು ಹೆಚ್ಚು ಇಷ್ಟ ಪಡುತ್ತಾರೆಂಬುದು. ಆದರೆ ಅವರು ಬರೆದಿದ್ದಾರೆ, ಹೆಚ್ಚು ಬರೆದಿದ್ದಾರೆ. ಬರೆಯಿಸಿಯೂ ಇದ್ದಾರೆ - ನನ್ನಂಥ ಹತ್ತು ಹಲವು ಮಂದಿಯಿದ್ದಾರೆ. ಹರಿಯವರದು ಒಂದು ರೀತಿಯ ಬೆಂಬಿಡದ ಪ್ರೀತಿ. ಅವರೇನೂ ಒತ್ತಾಯ ಮಾಡುತ್ತಿರಲಿಲ್ಲವಾದರೂ ನಾವೇ ಬರೆದುಬಿಡೋಣವೆಂಬ ಒಂದು ಪ್ರೀತಿಯನ್ನು ಮೂಡಿಸುತ್ತಿದ್ದುದು ಹರಿಯವರ ಹೆಚ್ಚುಗಾರಿಕೆ. ಯುವಕರನ್ನೂ ನಾಚಿಸುವ ಉತ್ಸಾಹ ಇವರದಾಗಿತ್ತು.

ಬೇ ಏರಿಯಾಕ್ಕೆ ಬಂದ ಸಾಹಿತಿಗಳನ್ನೆಲ್ಲ ಚೆನ್ನಾಗಿ ಬಲ್ಲವರು ಹರಿಯವರು. ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಒಮ್ಮೆ ಸಾಹಿತಿಗಳ ಸನ್ಮಾನ-ಸಂಭಾಷಣೆಗಳನ್ನು ಏರ್ಪಡಿಸದೇ ಇರುತ್ತಿರಲಿಲ್ಲ. ಅವರೂ ಅವರ ಶ್ರೀಮತಿಯವರೂ ಅವಿರತವಾಗಿ ಕನ್ನಡಕ್ಕಾಗಿ ಶ್ರಮಿಸುತ್ತಿದ್ದರು. ಕನ್ನಡಕ್ಕೆ ಮಾತ್ರವಲ್ಲದೇ ಸನಾತನ ಧರ್ಮದಲ್ಲಿ ಶ್ರದ್ಧೆಯುಳ್ಳವರಾಗಿದ್ದರು. ಹಿಂದೂ-ಪರ ಸಂಸ್ಥೆಗಳಿಗೆ ಬೌದ್ದಿಕ-ಸಾಂಸ್ಕೃತಿಕ ಸಾಹಾಯ್ಯವನ್ನು ನೀಡುತ್ತಿದ್ದರು.  ಹಲವು ಮದುವೆಗಳನ್ನೂ ಇವರೇ ಪುರೋಹಿತರಾಗಿ ಮಾಡಿಸಿದ್ದರು. ಇವರ ಮಂತ್ರಾನುವಾದಗಳ ಹೊತ್ತಗೆಗಳನ್ನು ನಾನು ನೋಡಿದ್ದೇನೆ.

ಸುಮಾರು ೨೦೦೩/೨೦೦೪ ರಲ್ಲಿ ಭಾರತಕ್ಕೆ ಇವರು ಮರಳಿದರೂ ಒಮ್ಮೊಮ್ಮೆ ಅಮೇರಿಕಕ್ಕೆ ಬಂದು ಹೋಗುತ್ತಿದ್ದರು. ನಂತರ ನಾನೂ ಮರಳಿದೆ. ಅವರ ಅಕ್ಕರೆ ಎಷ್ಟಾಗಿತ್ತೆಂದರೆ ಅವರೇ ನನಗೆ ಒಮ್ಮೊಮ್ಮೆ ಮೈಸೂರಿನಿಂದ ಫೋನಿಸುತ್ತಿದ್ದರು. ಹಿರಿಯರು ಕರೆದಿದ್ದರೂ ಮೈಸೂರಿಗೆ ಅವರನ್ನು ನೋಡಲು ಒಮ್ಮೆಯೂ ಹೋಗದ ದುರ್ಬುದ್ಧಿಯ ದೀರ್ಘಸೂತ್ರತೆ ನನ್ನದು. ಆಮೇಲೆ ನೋಡೋಣ, ಇನ್ನೊಮ್ಮೆ ನೋಡೋಣ ವೆಂದು ಮುಂದೂಡುತ್ತಲೇ ಇದ್ದೆ. ಈಗ ನೋಡಿದರೆ ದೈಹಿಕವಾಗಿ ಅವರೇ ನಮ್ಮೊಂದಿಗಿಲ್ಲ. ಹಾಗೆ ಯೋಚಿಸುತ್ತಿದ್ದ ನನಗೆ ನನ್ನ ತಾಯಿ - "ನೋಡು, ಮುಂದೂಡುವುದರ ಪರಿಣಾಮ" ಎಂದು ಒಮ್ಮೆ ಬೈದರು. ನನ್ನ ಮುಂದೂಡುವಿಕೆಯ ರೋಗವೇ ಅವರನ್ನೊಮ್ಮೆ ಕಣ್ತುಂಬ ನೋಡಿ ಬಾಯ್ತುಂಬ ಮಾತಾಡಿಸುವ ಅವಕಾಶವನ್ನು ಶಾಶ್ವತವಾಗಿ ತಪ್ಪಿಸಿತು. ಅದು ನನಗೆ ಒಂದು ಶಿಕ್ಷೆ. ಇರಲಿ - ಇದರಿಂದಲೂ ನನಗೆ ಮರೆಯದ ಪಾಠ ಕಲಿಸಿದ್ದಾರೆ ಹರಿಯವರು.

ಹರಿಹರೇಶ್ವರರಲ್ಲಿ ಕೋಪದ ಕಠೋರ-ಹರ ನಮಗೆ ಕಾಣಿಸಲೇ ಇಲ್ಲ. ವಾತ್ಸಲ್ಯಪೂರ್ಣ-ಹಾಸವೇ
ಅವರ ಮುಖದಲ್ಲಿ ಆಡುತ್ತಿದ್ದು, ನಮಗೆ "ಹರಿ"ಯೇ ಅವರ ಮುಖದಲ್ಲಿ ಕಂಡದ್ದು.
ಹರಿಹರೇಶ್ವರರೆಂದು ಹೆಸರಿದ್ದರೂ ಅವರನ್ನು "ಹರಿಯವರು" ಎಂದೇ ನಾವೆಲ್ಲ ಅದಕ್ಕೇ
ಕರೆಯುತ್ತಿದ್ದೆವು ಅನ್ನಿಸುತ್ತದೆ. ಈಗ ನಮ್ಮ ಹರಿಯವರು ಹರಿಪದವನ್ನು ಸೇರಿದ್ದಾರೆ.

ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಅವರ ಕುಟುಂಬದ ಸದಸ್ಯರಿಗೆಲ್ಲರಿಗೂ ಆ ಸರ್ವಶಕ್ತನಾದ ಭಗವಂತನು ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತ ಈ ಲೇಖನವನ್ನು ಶ್ರದ್ಧಾಂಜಲಿಯಾಗಿ ಹರಿಯವರಿಗೆ ಅರ್ಪಿಸುತ್ತೇನೆ.