Thursday, August 17, 2006

ಸ್ವಾತಂತ್ರ್ಯದಿವಸದ ಕಿರುನೆನಪುಗಳು

ಸಾಕಷ್ಟು ಸ್ವಾತಂತ್ರ್ಯದಿವಸಗಳನ್ನು ನೋಡಿದ್ದೇನೆ. ಒಂದರಂತೆ ಒಂದಿಲ್ಲದಿದ್ದರೂ ಆ ದಿನ ಸಾಮಾನ್ಯವಾಗಿ ಮೂಡಿಸುವ ಭಾವನೆಗಳು ಬಹುಪಾಲು ಹಾಗೆಯೇ ಇಂದಿಗೂ ಇವೆ.

ಶಾಲೆಯಲ್ಲಿ ಓದುವಾಗ ಸ್ವಾತಂತ್ರ್ಯದಿನ ನಮ್ಮ ದೇಶದ ಬಗ್ಗೆ ಯೋಚಿಸುವ ಸಮಯವಾಗಿತ್ತು. ವಿಶೇಷವಾಗಿ ಸ್ವಾತಂತ್ರ್ಯಸಂಗ್ರಾಮದ ಬಗ್ಗೆ. ಅಂದಿನ ಹುತಾತ್ಮರ ಬಗ್ಗೆ. ಗಾಂಧಿ-ನೆಹರು-ಪಟೇಲ್ ಮುಂತಾದವರ ಹಳೆಯ ಚಿತ್ರಗಳು ಟಿ.ವಿ.ಯಲ್ಲಿ ಬಿತ್ತರಗೊಳ್ಳುತ್ತಿದ್ದವು. ಅದನ್ನೇ ನೋಡಿ ನನಗೆ ಸಂತೋಷ. ದೇಶಭಕ್ತಿಯ ತಾತ್ಕಾಲಿಕ ಆವೇಶ. ಜೊತೆಗೆ ಬಿಳಿಯ ಸಮವಸ್ತ್ರ ಧರಿಸಿ ಶಾಲೆಗೆ ಹೋಗೋಣ - ಅಲ್ಲಿ ಸಾಮೂಹಿಕ ವ್ಯಾಯಾಮದಲ್ಲಿ ಪಾಲ್ಗೊಳ್ಳೋಣ - ಧ್ವಜಾರೋಹಣ ಕಾರ್ಯಕ್ರಮದ ನಂತರ ಚಾಕಲೇಟ್ ಅಥವಾ ಮತ್ತೊಂದು ಮಿಠಾಯಿಯ ತಿನ್ನೋಣ ಎಂಬ ಕ್ರಮವೇ ಸಾಧಾರಣವಾಗಿ ಎಲ್ಲ ಶಾಲೆಗೆ ಹೋಗುವ ಮಕ್ಕಳಿಗೂ ಇದ್ದಿತ್ತು.

ಶಾಲೆಯ ನಂತರ ಕಾಲೇಜು. ಅಲ್ಲಿ ಶಾಲೆಗೆ ಹೋಗಲೇ ಬೇಕೆಂಬಂತೆ ಕಡ್ಡಾಯವಿಲ್ಲ. ಹೋಗಲು ಇಷ್ಟವಿದ್ದವರು ಹೋಗಬಹುದು. ಇಲ್ಲದೇ ಮನೆಯಲ್ಲಿರಬಹುದು. ನನಗೋ ಎನ್.ಸಿ.ಸಿ ಮುಂತಾದ ಚಟುವಟಿಕೆಗಳು ಸ್ವಲ್ಪ ಬೋರು ಹೊಡೆಸುವಂಥವು. (ಈಗ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಪಶ್ಚಾತ್ತಾಪ, ಬಿಡಿ) ಕ್ರಿಕೆಟ್, ಕಥೆಪುಸ್ತಕ ಓದುವುದು, ಬೀದಿ ಸುತ್ತುವುದು, ಟಿ.ವಿ. ನೋಡುವ ಮೊದಲಾದ ಕಾರ್ಯಕ್ರಮಗಳೇ ಇಷ್ಟ. ಕಡ್ಡಾಯವಿರದುದರಿಂದ ಗರಿಗೆದರಿದ ಹಕ್ಕಿಯ ಹಾಗೆ ನನಗೂ ಸ್ವಾತಂತ್ರ್ಯದ ಅನುಭವ. ಆದರೂ ಮನೆಯ ಒಳಗೆ ಕಾಫಿ ಹೀರುತ್ತಾ ಕೆಂಪು ಕೋಟೆಯ ಮೇಲಿನ ಭಾಷಣದ ವೀಕ್ಷಣೆ . ಅಂದಿನ ಪ್ರಧಾನಿಗಳು ಏನು ಹೇಳಿದರೋ ಯಾರಿಗೆ ಗೊತ್ತು? ಹೇಗಿದ್ದರೂ "ಹೇಳುವುದು ಒಂದು - ಮಾಡದಿರುವುದೇ ಹಲವು ಹನ್ನೊಂದು" ಎಂಬ ನನ್ನ ಆಗಲೇ ಮೂಡಿದ ಒಂದು ಸಿನಿಕತೆ (cynicism) ಬೇರೆ! ಆದರೆ ಇದರ ನಡುವೆಯೂ ದೇಶಭಕ್ತಿಯ ತಾತ್ಕಾಲಿಕ ಆವೇಶ!

ನಂತರ ಅಮೇರಿಕಕ್ಕೆ ಗಮನ. ಅಲ್ಲಂತೂ ಈ ದಿನದಂದು ರಜೆಯಿಲ್ಲ. ಮಾಮೂಲಿನ ಹಾಗೆ ಇದೂ ಒಂದು ದಿನ. ಕೆಲಸವೆಲ್ಲವೂ ಮಾಮೂಲಿನ ಹಾಗೆಯೇ! ಆದರೆ ದೇಶವನ್ನು ಬಿಟ್ಟವರಿಗೆ ಏನನ್ನೋ ಬಿಟ್ಟಿದ್ದೇವೆಂಬ ಭಾವನೆ ಹೆಚ್ಚಾಗಿರುತ್ತದೆ ಎಂಬುದು ನನ್ನ ಅನುಭವ. ಅಂದು ವಿಶೇಷವಾಗಿ ನಮ್ಮ ದೇಶದಲ್ಲಿ ಏನು ನಡೆಯಿತು ಎಂದು ಅಂತರ್ಜಾಲ ಪತ್ರಿಕೆಗಳಲ್ಲಿನ ವಿಷಯದ ಹೆಕ್ಕುವಿಕೆ. ಏನೂ ಆಗದಿರಲಿ ಭಯೋತ್ಪಾದಕರಿಂದ ಎಂಬ ಪ್ರಾರ್ಥನೆ. ನಮ್ಮ ದೇಶದ ಆಡಳಿತಕ್ಕೆ ಏನಾಗಿದೆ ಎಂಬ ಒಂದು ಚಿಂತೆ. ಅಮೇರಿಕದ ಸೌಲಭ್ಯಗಳನ್ನು ನೋಡಿ ನಮ್ಮ ದೇಶಕ್ಕೆ ಹೀಗೆ ಎಂದಾಗುವುದೋ ಎಂಬ ಯೋಚನೆ. ಜೊತೆಗೆ ಶುಭಾಶಯಗಳನ್ನು ನೀಡಲು ಅವರಿವರಿಗೆ ಈ-ಮೈಲ್ ಕಳಿಸಿವುದು. ಕಾರ್ಯಕ್ರಮವೇನಾದರೂ ಇದ್ದರೆ ವಾರಾಂತ್ಯದಲ್ಲಿ ಇರುತ್ತಿತ್ತು. ಅದರಲ್ಲಿ ಆದಾಗ ಭಾಗವಹಿಸುವುದು. ಹೀಗೆ ಅಲ್ಲಿ ಸಾಗಿತ್ತು. ಅಲ್ಲೂ ದೇಶಭಕ್ತಿಯ ಆವೇಶ - ಇನ್ನೂ ತಾತ್ಕಾಲಿಕವೇ!

ಭಾರತಕ್ಕೆ ಮರಳಿದ ನಂತರ ಆಗಸ್ಟ್ ೧೫ರಂದು ರಜೆಯಂತೂ ಸಿಗುತ್ತದೆ. ಆದರೆ ಸಾಮಾನ್ಯದ ರಜೆಯಂತಾಗಿದೆ. ಧಾರ್ಮಿಕವಾದ ಒಂದು ಅಂಶ ಈ ದಿನಕ್ಕಿಲ್ಲ. ಆದ್ದರಿಂದ ವಿಶೇಷದ ಹೂವು ಹಣ್ಣು ಪೂಜೆ ಇತ್ಯಾದಿಗಳು ಅಂದು ಇರುವುದಿಲ್ಲ. ಒಂದೇ ಒಂದು ಸಂಗತಿ ಈ ನಡುವೆ ಬೆಂಗಳೂರಿನಲ್ಲಿ ಕಾಣಿಸಿತು. ಅದು ಭಾರತದ ಬಾವುಟಗಳ ಮಾರಾಟ. ಸಣ್ಣ ಹಾಗು ದೊಡ್ಡ ಗಾತ್ರದ ಬಾವುಟಗಳು ಪ್ರತಿಯೊಂದು ದೊಡ್ಡ ಟ್ರಾಫಿಕ್ ಸಿಗ್ನಲ್ ನಲ್ಲಿಯೂ ಲಭ್ಯ. ಬಹುತೇಕ ಎಲ್ಲ ಆಟೋಗಳ ಮೇಲೆ ನಮ್ಮ ದೇಶದ ಧ್ವಜದ ಹಾರಾಟ. ಜೊತೆಗೆ ಕಾರು ಬೈಕುಗಳ ಮೇಲೆಯೂ. ನಮ್ಮ ಸರ್ಕಾರ ದೊಡ್ಡ ಮನಸ್ಸು ಮಾಡಿ ಈಗ ಬಾವುಟಗಳನ್ನು ನಿರ್ಬಂಧಿಸುವುದನ್ನು ನಿಲ್ಲಿಸಿದೆ. ಅದರಿಂದಲೇ ಈಗ ಬಾವುಟಗಳ ಬಿರುಸಾದ ಬಿಕರಿ ನಡೆದಿರುತ್ತದೆ. ಹಿಂದೆಯಾದರೋ ಬಾವುಟವೆಂದರೆ ಮಡಿಯ ವಸ್ತು - ಅದನ್ನು ಮುಟ್ಟಿದರೇ ಅದಕ್ಕೆ ಅವಮಾನ ಮಾಡಿದ ಹಾಗೆ ಅನ್ನಿಸುವಷ್ಟು ಕಠಿನ ನಿಯಮಗಳು ಜಾರಿಯಲ್ಲಿದ್ದವು. ಇವುಗಳ ಸಡಿಲಿಕೆ ಸರ್ಕಾರ ಮಾಡಿರುವ ಒಳ್ಳೆಯ ಕೆಲಸ. ಅವುಗಳು "ಮೇಡ್ ಇನ್ ಚೈನಾ" ಆಗದಿದ್ದರೆ ಒಳ್ಳೆಯದು! (ಅಮೇರಿಕದಲ್ಲಿ ಸಾಮಾನ್ಯವಾಗಿ ಅಲ್ಲಿನ ಸಾಮಾನ್ಯ ಖರೀದಿಗೆ ಸಿಗುವ ಬಾವುಟಗಳೆಲ್ಲವೂ ಮೇಡ್ ಇನ್ ಚೈನಾ!). ಈ ಬಾವುಟದ ಅಂಶ ಬಿಟ್ಟರೆ ಈ ದಿನ ಸಾಮಾನ್ಯದ ರಜೆ. ಹೌದು, ಇಂದೂ ಕೆಂಪು ಕೋಟೆಯ ಮೇಲೆ ನಿಂತು ಮಾತುಗಳನ್ನಾಡುತ್ತಾರೆ, ಆದರೆ ಅವು ಎಂದಿನಂತೆ ಪ್ರಯೋಜನಕ್ಕೆ ಬಾರದವು. ಬದಲಾವಣೆಗಳಾಗಿಯೂ ಬದಲಾವಣೆಯಿಲ್ಲದ ವರ್ತನೆಗಳು ನನ್ನಲ್ಲಿನ ಸ್ವಾತಂತ್ರ್ಯ ದಿನದ ತಾತ್ಕಾಲಿಕ ದೇಶಭಕ್ತಿಯ ಆವೇಶವನ್ನೂ ಇಲ್ಲದ ಹಾಗೆ ಮಾಡಿವೆ. ಈ ಆವೇಶಕ್ಕೆ ಕಾರಣವೇನೆಂದು ಹುಡುಕಲು ಮೊದಲು ಹೊರಟ ನನಗೆ ಈ ಆವೇಶ ವ್ಯರ್ಥವಾದದ್ದು, ನಿರರ್ಥಕವಾದದ್ದು ಎಂಬ ಭಾವನೆ ತರಿಸಿತ್ತು.

ಈ ಹತಾಶೆಯ ನಡುವೆ ಮೊನ್ನೆ ಶಾಲೆಯೊಂದರ ಮುಂದೆ ಹಾದು ಹೋಗುವ ಸಂದರ್ಭ ಬಂದಿತು. ಬಿಳಿ ಉಡುಪುಗಳನ್ನು ಧರಿಸಿ ಮಕ್ಕಳು ಹೊರಗೆ ಬರುತ್ತಿದ್ದರು. ಅವರ ಮುಖಗಳ ಮೇಲಿನ ನಗೆ, ಆ ಕಣ್ಣುಗಳಲ್ಲಿನ ಕಾಂತಿ, ಅವರು ಸೂಸುವ ಆಶಾಭಾವನೆ, ಅವರಲ್ಲಿನ ಲವಲವಿಕೆ - ಇವೆಲ್ಲವೂ ನನ್ನನ್ನು ಒಮ್ಮೆಲೆ ತಟ್ಟಿತು. "ಎಲ್ಲವೂ ಇನ್ನು ಹಾಳಾಗಿಲ್ಲ. All is not lost" ಎಂದು ಮನ ಹರ್ಷಿಸಿತು.
ಇತಿ ಶಮ್

1 comment:

Anonymous said...

very well written about the independence day. it reminded me of my days in school when i was involved in the NCC. i had joined NCC coz my seniors told that they give FREE masale dose!
aadaroo kaafi heerutta kempu koteya veekshane
i could visualise you doing that!

btw, i wrote a piece on the plastic flags that have become so common during august 15th. and i feel that the plastic flags should be banned. what is your take on this?

link to the article:
http://bellurramki18.wordpress.com/2006/08/02/ban-on-plastic-flags/