Tuesday, July 18, 2006

ಪುಸ್ತಕ ಪರಿಚಯ - ರುದ್ರಮ ದೇವಿ

ಶ್ರೀಯುತರಾದ ನೋರಿ ನರಸಿಂಹ ಶಾಸ್ತ್ರಿಗಳು ತೆಲುಗು ಭಾಷೆಯ ಒಳ್ಳೆಯ ಕಾದಂಬರಿಕಾರರಲ್ಲಿ ಒಬ್ಬರು. ಐತಿಹಾಸಿಕ ಕಾದಂಬರಿಗಳಲ್ಲಿ ಇವರದ್ದು ಎತ್ತಿದ ಕೈ. ಸಾಹಿತ್ಯದಲ್ಲೂ ನುರಿತ ಶಾಸ್ತ್ರಿಗಳು ವೃತ್ತಿಯಿಂದ ವಕೀಲರಾಗಿದ್ದರು. ಆಂಧ್ರದೇಶದ ಚರಿತ್ರೆಯ ನಿರೂಪಣೆ ಇವರಿಂದ ಬಹಳ ಚೆನ್ನಾಗಿ ಆಗಿದೆ. ವಿಶೇಷವಾಗಿ ಸಾಹಿತ್ಯ ನಿರ್ಮಾಣಕ್ಕೂ ಚರಿತ್ರೆಗೂ ಇರುವ ಸಂಬಂಧವನ್ನು ಚೆನ್ನಾಗಿ ತೋರಿದ್ದಾರೆ. ನಾನು ಬರೆದ ಈ ಮಾತು ಅವರ ಕಾದಂಬರಿಗಳನ್ನು ಮೂಲದಲ್ಲಿ ಓದಿದವರಿಂದ. ರುದ್ರಮದೇವಿಯಲ್ಲದೆ ನಾರಾಯಣ ಭಟ್ಟು, ಮಲ್ಲಾರೆಡ್ಡಿ, ಧೂರ್ಜಟಿ ಮೊದಲಾದವುಗಳು ಇವರ ಇತರ ಕಾದಂಬರಿಗಳು.

ರುದ್ರಮದೇವಿ ನಾನು ಪರಿಚಯಿಸಲಿಚ್ಛಿಸುವ ಕಾದಂಬರಿ. ತೆಲುಗು ಮೂಲವನ್ನು ಸಮರ್ಥವಾಗಿ ಸೊಗಸಾಗಿ ಕನ್ನಡದಲ್ಗಿ ಅನುವಾದ ಮಾಡಿದ್ದಾರೆ. ಆನುವಾದಕರು ಕನ್ನಡಾಂಧ್ರ-ಉಭಯಭಾಷಾ-ಪಂಡಿತರಾದ ಶ್ರೀ ವೆಂಕಟರಾಮಪ್ಪನವರು. ಅನುವಾದಕರು ತೆಲುಗು ಸಾಹಿತ್ಯವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದರಿಂದ ಮೂಲದ ತೆಲುಗು ಸಾಹಿತ್ಯದ ಸೊಬಗು ಕನ್ನಡದ ಅನುವಾದದಲ್ಲೂ ಉಳಿದಿದೆ.

ಝಾಂಸಿಯ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಹೇಗೆ ಕನ್ನಡಿಗರಲ್ಲಿ ವೀರನಾರಿಯರಾಗಿ ಕಂಡುಬರುವರೋ, ಅವರಿಗಿಂತಲೂ ಹೆಚ್ಚಿನ ವೀರಭಾವನೆಯನ್ನು ಅಂಧ್ರರಲ್ಲಿ ತರಿಸುವ ಹೆಸರು ರುದ್ರಮದೇವಿಯದು. ಆಂಧ್ರದ ಓರಂಗಲ್ಲು ಪ್ರಾಂತ ಕಾಕತೀಯ ವಂಶಕ್ಕೆ ಹೆಸರಾದದು. ಇದೇ ವಂಶದವರು ಗಜಪತಿಗಳೆಂದೂ ಖ್ಯಾತಿ ಪಡೆದಿದ್ದರು.

ಕಥಾವಸ್ತುವಿನ ಸ್ಥೂಲನಿರೂಪಣೆ ಹೀಗಿದೆ - ಓರಂಗಲ್ಲಿನ ಗಣಪತಿದೇವ ಮಹಾರಾಜನು ವಾರ್ಧಕ್ಯದಿಂದ ಅನಾರೋಗ್ಯದಿಂದ ಬಳಲುತ್ತಿರುವಾಗ ನೆರೆರಾಜ್ಯದವರು ಅವಕಾಶವನ್ನುಪಯೋಗಿಸಿಕೊಂಡು ದಂಡೆತ್ತಿಬರುವಂಥ ಸಂದರ್ಭದೊಂದಿಗೆ ಕಾದಂಬರಿಯ ಆರಂಭ. ಇದರ ಜೊತೆಗೆ ಸಿಂಹಾಸದ ಉತ್ತರಾಧಿಕಾರಿ ಯಾರೆಂಬುದನ್ನೂ ನಿರ್ಧರಿಸಬೇಕಾದ ಸಮಯ. ಗಣಪತಿದೇವರಿಗೆ ಗಂಡು ಸಂತಾನವಿಲ್ಲದೆ ಇದ್ದುದರಿಂದ ಮುಂದಿನ ಮಹಾರಾಜರಾರು ಎಂಬುದು ಕುತೂಹಲಕ್ಕೆ ಕಾರಣವಾಗುತ್ತದೆ. ಆದರೆ ಮಹಾರಾಜರ ಮಗಳಾಗಿದ್ದವಳು ರುದ್ರಮದೇವಿ. ನವರಾತ್ರಿಯ ಸಮಯದಲ್ಲಿ ಆರಂಭವಾಗುವ ಈ ಕಥೆಯ ಪ್ರಾರಂಭದ ಹೊತ್ತಿಗೆ ರುದ್ರಮದೇವಿಯಾಗಲೇ ವಿವಾಹಿತೆ. ವಿರೂಪಾಕ್ಷದೇವನೆಂಬ ರಾಜ ಈಕೆಯ ಪತಿ. ಈಕೆಗೆ ಮೊಮ್ಮಗನಾದ ಪ್ರತಾಪರುದ್ರನೂ ಹುಟ್ಟಿರುತ್ತಾನೆ. ಹೀಗಾಗಿ ಸಿಂಹಾಸನಕ್ಕಾಗಿ ರುದ್ರಮಳೇ ಮೊದಲಾಗಿ ತನ್ನ ಮೊಮ್ಮಗ, ಅಳಿಯ ಮತ್ತು ಪತಿ ಕೂಡ ಪೈಪೋಟಿಯಲ್ಲಿರುತ್ತಾರೆ.

ಆಸ್ಥಾನದಲ್ಲಿ ಮಹಾರಾಜರು ಮತ್ತವರ ಸಭಿಕರು ಹೇಗೆ ನಡೆದುಕೊಂಡಿದ್ದಿರಬಹುದು, ಗಂಭೀರ ಸಮಸ್ಯೆಗಳನ್ನು ಹೇಗೆ ಸುಲಭಗೊಳಿಸುತ್ತಿದ್ದರು ಎಂದು ತೋರಿಸುವ ಕಥೆಯ ಮುಂದಿನ ಭಾಗ ಬಹು ರೋಚಕವಾದುದು. ಸಿಂಹಾಸನವನ್ನೇರುವುದಕ್ಕೆ ರುದ್ರಮಳೇ ಸರಿಯೆಂದು ಸಭೆ ನಿರ್ಧರಿಸುತ್ತದೆ. ಇದರಿಂದ ತನ್ನ ಪತಿ ಮತ್ತು ಅಳಿಯರು ತನ್ನಿಂದ ದೂರವಾಗುತ್ತಾದೆ. ಹಾಗಾದರೂ ಧೃತಿಗೆಡದೆ ರುದ್ರದೇವ ಮಹಾರಾಜನೆಂದೇ ಕರೆಸಿಕೊಂಡು ರಾಜ್ಯವನ್ನು ಹೇಗೆ ನೆರೆರಾಜ್ಯದವರಾದ ಚೋಳ, ಚಾಲುಕ್ಯ ಮತ್ತು ಯಾದವರಿಂದ ರುದ್ರಮ ದೇವಿ ಹೇಗೆ ಕಾಪಾಡುತ್ತಾಳೆಂಬುದು ಕಥೆಯ ಮುಖ್ಯ ವಸ್ತು.

ಸೆಣಸಾಟವೊಂದು ಕಡೆಯಿದ್ದರೆ ಆಂಧ್ರ ಮಹಾಭಾರತದ ನಿರ್ಮಾಣ ತಿಕ್ಕನ ಕವಿಗಳಿಂದ ಹೇಗೆ ರಚಿತವಾಯ್ತು ಎಂಬುದು ಸಹ ಕಥೆಯ ಉಪನದಿಯಾಗಿ ಉದ್ದಕ್ಕೂ ಹರಿದು ಬರುತ್ತದೆ.ಈ ಭಾಗ ನರಸಿಂಹ ಶಾಸ್ತ್ರಿಗಳ ಸಾಹಿತ್ಯರಸಜ್ಞತೆಗೆ ಸಾಕ್ಷಿಯಾಗಿದೆ. ಮಹಾಭಾರತದ ರಚನಾಕ್ರಮವನ್ನು ಸೊಗಸಾಗಿ ನಿರೂಪಿಸಿದ್ದಾರೆ. ತಿಕ್ಕನಾಮಾತ್ಯರು ತಮ್ಮ ಶಿಷ್ಯರೊಂದಿಗೆ ಓರಂಗಲ್ಲಿನ ಶಿವ-ಕೇಶವದೇವಾಲಯದೆದುರಿನ ಮಂಟಪದಲ್ಲಿ ಮೊದಲು ವ್ಯಾಸಭಾರತದ ಕೆಲ ಶ್ಲೋಕಗಳನ್ನು ಓದುವರು. ಆ ಭಾಗದ ರಸವನ್ನು ಗ್ರಹಿಸಿದ ಬಳಿಕ ಅದೇ ರಸವನ್ನು ತೆಲುಗು ಭಾಷೆಯಲ್ಲಿಳಿಸುತ್ತಿದ್ದರು.

ಇನ್ನೊಂದು ಸಾಹಿತ್ಯದ ಕೊಂಡಿ - ಕಥೆಯಲ್ಲಿನ ಪಾತ್ರಗಳಾಗಿ ಬರುವ ಬದ್ದೆನಾಮಾತ್ಯ (ಸುಮತಿ ಶತಕದ ರಚಯಿತಾ) ಮತ್ತು ಜಾಯಪನಾಯಕ (ನೃತ್ತರತ್ನಾವಳಿಯ ಕರ್ತಾ) ಇವರುಗಳು ಹೇಗೆ ಕಥೆಯೊಂದಿಗೆ ಸಾಹಿತ್ಯರಸವನ್ನು ವ್ಯಕ್ತಪಡಿಸುವರು ಎಂಬುದು ಕಾಣುತ್ತದೆ. ವಾಸ್ತವವಾಗಿ ಇವರು ಮತ್ತು ರುದ್ರಮದೇವಿ ಸಮಕಾಲೀನರೂ, ಅದೇ ಪ್ರದೇಶದಲ್ಲಿದ್ದವರು ಆಗದೇ ಇರಬಹುದು. ಆದರೆ ಶಾಸ್ತ್ರಿಗಳ ಕಲ್ಪನಾಸಾಮರ್ಥ್ಯ ಇವರೆಲ್ಲರನ್ನು ಒಂದೇ ಕಥೆಯಲ್ಲಿನ ಪಾತ್ರಗಳನ್ನಾಗಿ ಮಾಡುತ್ತದೆ.

ಕೊಪ್ಪೆರುಂಜಿಂಗ (ಪೆರುಂ ಜಿಂಗ - ಮಹಾ ಸಿಂಹ) ಎಂಬ ಚೋಳ ರಾಜನ ಕಲಾಪಿಪಾಸೆಯೂ ಇಲ್ಲಿ ಕಾಣುತ್ತದೆ. ಯುದ್ಧದ ಸಮಯದಲ್ಲೂ ತನ್ನ ಅತಿಯಾದ ಆತ್ಮವಿಶ್ವಾಸದಿಂದ ನಾಟಕಗಳನ್ನು ಆಡಿಸಿ ನೋಡುವ ಚಪಲ ಮತ್ತು ಕಲಾನಿಷ್ಠೆ ರಾಜರದು. ಒಂದು ಸನ್ನಿವೇಶವನ್ನು ಇಲ್ಲಿ ಅವಶ್ಯವಾಗಿ ಸ್ಮರಿಸಬೇಕು. ಚೋಳರಾಜನಿಗೆ ಭಾಸನ ಊರುಭಂಗ ನಾಟಕವನ್ನು ಮಾಡಿಸಿ ಸಹೃದಯರೊಂದಿಗೆ ನೋಡುವ ಆಸೆ ಮೂಡುತ್ತದೆ. ಆದರೆ ಭಾಸನ ನಾಟಕಗಳು ಭರತಮುನಿಯ ನಿಯಮಗಳಿಗಿಂತ ಮುಂಚೆ ರಚಿತವಾದವುಗಳು. ಆದ್ದರಿಂದ ರಂಗಸ್ಥಳದಲ್ಲಿ ಅಗ್ನಿಯನ್ನಾಗಲಿ, ನೀರನ್ನಾಗಲಿ, ನಿರ್ಯಾಣ (ಸಾವು)ವನ್ನಾಗಲಿ ತೋರಿಸದೇ ಇರುವುದು ಸಾಧುವೆಂದು ಆಗಿನ ನಾಟಕಕಾರರಿಂದ ಅಂಗೀಕೃತವಾದ ಭರತಮುನಿಯ ಮತ. ಇದೇ ಮತದವರು ಆಂಧ್ರದ ಬ್ರಾಹ್ಮಣವಿದ್ವಾಂಸರು. ದುರದೃಷ್ಟವಶಾತ್ ರಾಜನು ಇವರನ್ನೇ ನಾಟಕಕ್ಕಾಗಿ ಆಹ್ವಾನಿಸುತ್ತಾನೆ. ಇಂಥ ಛಾಂದಸರಾದ ಬ್ರಾಹ್ಮಣರೆದುರು ಊರುಭಂಗದ ಕೊನೆಯ ಘಟನೆಯಾದ ದುರ್ಯೋಧನ ಪಾತ್ರದ ಸ್ವರ್ಗಾರೋಹಣವಾಗುತ್ತದೆ. ಇದನ್ನು ಕಂಡ ಬ್ರಾಹ್ಮಣರು ತಮಗೆ ಮೈಲಿಗೆಯಾಯ್ತೆಂದು ಮೃತಾಶೌಚ ತಗುಲಿತೆಂದು ಬಳಿಯಿದ್ದ ಗೋದಾವರಿಯಲ್ಲಿ ಸ್ನಾನ ಮಾಡಲು ಏಳುತ್ತಾರೆ. ನಾಟಕ ಪೂರ್ಣವಾಗುವ ಮುಂಚೆ ಎದ್ದಿದ್ದರಿಂದ ರಾಜನಿಗೆ ವಿಪ್ರರಿಂದ ಮಂಗಲಾಶಾಸನವಾಗುವುದಿಲ್ಲ. ಇದರಿಂದ ರಾಜ ಕ್ರುದ್ಧನಾಗುತ್ತಾನೆ. ಆದರೆ ವಿಪ್ರರನ್ನು ಬಂಧಿಸುವಷ್ಟು ಸಾಹಸ ರಾಜನಿಂದ ಮಾಡಲಾಗುವುದಿಲ್ಲ (ಆಗಿನ ಕಾಲದ ವಿಪ್ರರ ಸ್ಥಾನ ಹಾಗಿತ್ತು). ಇದು ಅಪಶಕುನವೆಂದು ಬಗೆದ ಅವನು ಯುದ್ಧದಲ್ಲಿ ಸೋತು ಹಿಂದಿರುಗುತ್ತಾನೆ.

ಇನ್ನೊಂದು ಸಂಗತಿ - ಜೈನ ಕಾರಕೂನರದು. ಜೈನರೇ ಲೆಕ್ಕಪತ್ರಗಳನ್ನು ನೋಡುತ್ತಿದ್ದ ಆ ಕಾಲದಲ್ಲಿ ಜೈನರ ಗುರುಗಳಿಗೆ ಆಸ್ಥಾನದಲ್ಲಿ ಸ್ವಲ್ಪ ಅವಮರ್ಯಾದೆಯುಂಟಾಗುತ್ತದೆ. ಇದರಿಂದ ಜೈನ ಮತಕ್ಕೇ ಅವಮಾನವೆಂದು ಬಗೆದು ಜೈನ ಕರಣಿಕರೆಲ್ಲರೂ ಕೆಲಸಕ್ಕೆ ಹಾಜರಾಗದೆ ಮುಷ್ಕರ ಹೂಡುತ್ತಾರೆ. ಈ ಮುಷ್ಕರವನ್ನು ಬ್ರಾಹ್ಮಣ ಕರಣಿಕರ ಮೂಲಕ ಹೇಗೆ ಬಗೆಹರಿಸುತ್ತಾರೆ ಎಂಬುದು ಸುಂದರವಾಗಿ ನಿರೂಪಿತವಾಗಿದೆ. ರಾಷ್ಟ್ರದ ಸಂಸ್ಕೃತಿಯ ಬಗ್ಗೆ ಗೌರವವಿಲ್ಲದವರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದು ಇಲ್ಲಿ ಚೆನ್ನಾಗಿ ವಿವರಿಸಲಾಗಿದೆ.

ಹಿಂದಿನ ಕಾಲದವರು "enjoy" ಮಾಡಲು ತಿಳಿಯದವರು ಎಂದು ಅಂದುಕೊಳ್ಳುವ ಜನರಿಗೆ ಹೇಗೆ ಆಗಿನ ಕಾಲದ ಉತ್ಸವಗಳು (ಧಾರ್ಮಿಕವಲ್ಲದ ಕೇವಲ ಲೌಕಿಕ ಉತ್ಸವಗಳು) ನಡೆಯುತ್ತಿದ್ದವು ಎಂಬುದನ್ನೂ ಶಾಸ್ತ್ರಿಗಳು ಸೊಗಸಾಗಿ ಬಣ್ಣಿಸಿದ್ದಾರೆ. ವಸಂತೋತ್ಸವಗಳು, ಕೌಮುದೀಜಾಗರ (ಬೆಳದಿಂಗಳಿನಲ್ಲಿ ಜಾಗರಣೆ) ಸುಂದರವಾಗಿ ವರ್ಣಿತವಾಗಿವೆ. ಅಲ್ಲಿ ನಡೆಯುವ ಸಹೃದಯ-ಸಮಾಗಮ ಪುನಃ ಪುನಃ ಸ್ಮರಣಯೋಗ್ಯ.

ರಾಜಕೀಯ ಪಿತೂರಿ ಹೇಗೆ ನಡೆಯುತ್ತಿತ್ತು, ಒಂದು ಮತದ ಜನರ ಮೇಲೆ ಮತ್ತೊಂದು ಮತದ ಜನರನ್ನು ಎತ್ತಿಕಟ್ಟುವುದು ಹೇಗೆ ಎಂಬ ಮೊದಲಾದ ಅಂಶಗಳು ಇಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಕೊನೆಯಲ್ಲಿ ರುದ್ರಮದೇವಿಯು, ಅಲ್ಲ, ರುದ್ರದೇವಮಹಾರಾಜನು ವಿಜೃಂಭಿಸುತ್ತಾನೆ.

ರುದ್ರಮದೇವಿಯ ಪಾತ್ರವಂತೂ ಚೆನ್ನಾಗಿ ಮೂಡಿದ್ದಿರಲೇಬೇಕು. ತನ್ನ ಪತ್ನೀಧರ್ಮವನ್ನು ಪಾಲಿಸಲೆಳಸುತ್ತಾ, ರಾಜಧರ್ಮವನ್ನೂ, ಮಾತೃಧರ್ಮವನ್ನೂ ಹೇಗೆ ಪಾಲಿಸುತ್ತಳೆಂಬುದನ್ನು ಓದಿಯೇ ಕಾಣಬೇಕು. ಅಂತಃಪುರದಲ್ಲಿ ರುದ್ರಮದೇವಿಯಾಗಿ, ಬಾಹ್ಯದಲ್ಲಿ ರುದ್ರದೇವಮಹಾರಾಜನಾಗುವುದು ಹೇಗೆ ಒಬ್ಬ ವ್ಯಕ್ತಿಯಿಂದ ಸಾಧ್ಯವೆಂಬುದನ್ನು ಶಾಸ್ತ್ರಿಗಳು ಸಾಧಿಸಿ ತೋರಿಸಿದ್ದಾರೆ.

ಗೃಹಬಂಧನಕ್ಕೊಳಗಾದರೂ ರಾಜ್ಯದ ಬಗ್ಗೆ ಹೆಚ್ಚಿನ ಕಳಕಳಿಯನ್ನು ಹೊಂದಿದ ಬ್ರಾಹ್ಮಣ-ಮಂತ್ರಿ ಅನ್ನಯ, ರುದ್ರಮದೇವಿಯ ಸಾಕುಮಗಳಾದ ಬ್ರಾಹ್ಮಣಕನ್ಯೆ - ರುಯ್ಯಮ್ಮ, ಆಂಧ್ರಮಹಾಭಾರತದ ನಿರ್ಮಾಣಮಾಡಿದ ತಿಕ್ಕನಾಮಾತ್ಯ, ಬಲಿಷ್ಠರಾದ ಪರಸ್ಪರ ಶತ್ರುಗಳಾಗಿ ನಂತರ ಪುನಃ ಮಿತ್ರರಾಗುವ ಬೊಲ್ಲ-ಗೊಂಡರು, ವಿಲಕ್ಷಣವಾದ ಯತಿಯ ರೂಪದಲ್ಲಿ ಬಂದ ಗೂಢಚಾರಿ - ಇವರೇ ಮೊದಲಾದವರು ಸ್ಮರಣೀಯ ಪಾತ್ರಗಳು.

ಭಾರತೀಯ ಸಂಸ್ಕೃತಿಯು ಕಾದಂಬರಿಯಲ್ಲೆಲ್ಲಾ ಹಾಸುಹೊಕ್ಕಾಗಿದೆ. ಸಂಸ್ಕೃತಿಪ್ರೇಮಿಗಳಿಗೆ, ಸಾಹಿತ್ಯಪ್ರೇಮಿಗಳಿಗೆ, ಕಲೋಪಾಸಕರಿಗೆ, ಇತಿಹಾಸಪ್ರಿಯರಿಗೆ ಈ ನವರಸಭರಿತ-ಗದ್ಯಕಾವ್ಯ ಮಹೋತ್ಸವಪ್ರಾಯವಾಗಿರುವಂತಹುದು. ಆಂಧ್ರರಾಜವೈಭೋಗ ಹೇಗಿತ್ತೆಂಬುದು ತಿಳಿಯಲಿಚ್ಛಿಸುವರು ಈ ಕಾದಂಬರಿಯನ್ನು ಓದಲೇಬೇಕು. ಕನ್ನಡಿಗರಾಗಲಿ, ಆಂಧ್ರರಾಗಲಿ, ಮೂಲತಃ ಭಾರತೀಯರು; ಸನಾತನ ಧರ್ಮ ಭಾರತದ ಜೀವಾಳವೆಂಬುದನ್ನು ಮರೆಯಬಾರದು. ಅದು ಹೇಗೆ ಸಾಧ್ಯವಾಗಿತ್ತೆಂದು ತಿಳಿಯಲು ಈ ಗ್ರಂಥವನ್ನೋದಬೇಕು.

ಕನ್ನಡದಲ್ಲಿ ಕೆಲವು ಐತಿಹಾಸಿಕ ಕಾದಂಬರಿಗಳನ್ನು ಓದಿದ್ದೇನೆ - ದುರ್ಗಾಸ್ತಮಾನವನ್ನೂ ಸಹ. ಆದರೆ ದುರ್ಗಾಸ್ತಮಾನ ಮೊದಲಾದ ಕಾದಂಬರಿಗಳಲ್ಲಿ ವೀರರಸಪ್ರಾಧಾನ್ಯವಿರುವುದು. ಆದರೆ ಈ ರೀತಿಯ ಯುದ್ಧ-ರಾಜ್ಯಶಾಸ್ತ್ರ-ಕಲಾ-ಸಾಹಿತ್ಯ-ನೃತ್ಯ-ಶಾಸ್ತ್ರಗಳೆಲ್ಲದರ ಮೇಲನ, ನವರಸಭರಿತವಾದಂತಹ ಗದ್ಯಕಾವ್ಯವನ್ನು ಇದೇ ಮೊದಲು ಓದಿದ್ದು.

ಈ ಕಾದಂಬರಿಯು ಸಾಹಿತ್ಯ ಅಕಾಡೆಮಿಯಿಂದ ಪ್ರಕಾಶಿತವಾಗಿದೆ. ಇದು ಎಲ್ಲಿ ದೊರೆಯುವುದೋ ತಿಳಿಯದು - ಆದರೆ ಯಾರಾದರೂ ಕೇಳಿದರೆ ಹುಡುಕಿ ತಿಳಿಸಬಲ್ಲೆ.

|| ಇತಿ ಶಮ್ ||

No comments: