Tuesday, June 27, 2006

ಎಷ್ಟು ದಿವಸಗಳಾದವು ಬರೆದು!!

ನನಗೆ ಬಹಳ ದಿನಗಳಿಂದ ಸಮಯ ದೊರೆತಿರಲಿಲ್ಲ. ನಾನು ಒಂದು ಬ್ಲಾಗ್ ಬರೆಯುತ್ತೇನೆ ಎಂಬ ಪರಿಜ್ಞಾನ ಇರದೆ ಹೋಗಲಿಲ್ಲವಾದರೂ ಬರೆಯಲು ಏಕೋ ಮನಸಾಗಲಿಲ್ಲ. ಮನಸ್ಸಿಗೆ ಏನಾದರೂ ಹೊಳೆದಾಗಲೆಲ್ಲಾ "ಹೌದು ಇದರ ಬಗ್ಗೆ ಬರೆಯಬೇಕು" ಎಂದು ಮನಸ್ಸಿನಲ್ಲಿಯೇ ಅಂದುಕೊಂಡದ್ದೂ ಆಯ್ತು ಮತ್ತು ಮರೆತದ್ದೂ ಆಯ್ತು. ಅಬ್ಬ! ಒಂದು ತಿಂಗಳಿಗಿಂತ ಹೆಚ್ಚಾಗಿದೆಯಲ್ಲಾ ಬ್ಲಾಗ್ ಬರೆದು!

ಇರಲಿ. ನನ್ನ ಬ್ಲಾಗಿನಲ್ಲಿ ಕೆಲವು ಬೆಂಗಳೂರಿನ ಚಿತ್ರಗಳನ್ನು ಹಾಕಬೇಕು ಎಂದು ಅಂದುಕೊಂಡಿದ್ದೆ. ಕೆಲವು ಚಿತ್ರಗಳನ್ನು ನನ್ನ ಛಾಯಾಗ್ರಾಹಿಕೆಯಲ್ಲಿ ಹಿಡಿದಿದ್ದೇನೆ ಕೂಡ! ಆದರೆ ಇನ್ನೂ ಹಾಕಬೇಕು. ಒಂದೆರಡು ದಿನವಾದ ಮೇಲೆ ನೋಡೋಣ.

ಇಂದು ವಿವಿಧಭಾರತಿಯಲ್ಲಿ ಸಿರಿಗನ್ನಡ ಕಾರ್ಯಕ್ರಮದಲ್ಲಿ ಸುಸ್ವಾಗತ ಎಂಬ ಪದದ ಬಗ್ಗೆ ಮಾಹಿತಿಯಿತ್ತು. ಇದರ ಬಗೆಗೆ ನನಗೆ ಮೊದಲೇ ತಿಳಿದಿತ್ತಾದರೂ ಇದರ ಬಗ್ಗೆ ಸ್ವಲ್ಪ ಬ್ಲಾಗಿಸುವ ಎಂದು ಬರೆಯುತ್ತಿದ್ದೇನೆ. ಸ್ವಾಗತ ಎಂಬುದು ಸಂಸ್ಕೃತ ಪದ. ಸು + ಆಗತ (ಯಣ್ ಸಂಧಿ) - ಒಳ್ಳೆಯ ಆಗಮನ ಎಂದು ಅರ್ಥ. ಸು ಎಂದರೆ ಒಳ್ಳೆಯದು. ಸುಸ್ವಾಗತ ಎಂದರೆ ಸು ಸು ಆಗತ ಎಂದಾಗುತ್ತದೆ. ಅರ್ಥವೇನೂ ಬದಲಾಗದಿದ್ದರೂ ಭಾಷೆಯಲ್ಲಿ ತಪ್ಪಾಗುತ್ತದೆ. ಶ್ರೀ ವೆಂಕಟಸುಬ್ಬಯ್ಯನವರ ಮಾತಿನಲ್ಲಿ "ಭಾಷೆಯೆಂಬ ಗದ್ದೆಯಲ್ಲಿ ಬೆಳೆಯುವ ಕಳೆಯ ಹಾಗೆ ಈ ರೀತಿಯ ಶಬ್ದಗಳು. ಗದ್ದೆಯಲ್ಲಿ ಕಳೆಯನ್ನು ಕೀಳುತ್ತಲೇ ಇರುವ ಹಾಗೆ ಭಾಷೆಯಿಂದಲೂ ಈ ರೀತಿಯ ಪದಗಳನ್ನು ತೆಗೆಯುತ್ತಲೇ ಇರಬೇಕು." ಇದೇ ಜಾತಿಗೆ ಸೇರುವ ಮತ್ತೊಂದು ಪದ - ಪ್ರಪ್ರಥಮ!

ಆದರೆ ಜನರು ಈ ತಪ್ಪನ್ನೇ ಹಿಡಿದಿದ್ದಾರಲ್ಲ! ಸಿರಿಗನ್ನಡ ಕಾರ್ಯಕ್ರಮವನ್ನು ನೀಡುವ ವಿವಿಧಭಾರತಿಯಲ್ಲೇ "ಸುಸ್ವಾಗತ" ಕೇಳಿ ಬರುತ್ತದೆ. ಇನ್ನೊಂದು ವ್ಯಾಕರಣದೋಷದ ಉದಾಹರಣೆ - ರಾಷ್ಟ್ರೀಯ ಎಂಬ ಪದ - ರಾಷ್ಟ್ರಕ್ಕೆ ಸಂಬಂಧ ಪಟ್ಟಿರುವುದಾದ್ದರಿಂದ ಅದು" ರಾಷ್ಟ್ರಿಯ"ವಾಗಬೇಕು ರಾಷ್ಟ್ರೀಯವಲ್ಲ! ಇದರ ಜೊತೆಗೆ "ಅಂತ" ಎಂಬುದು ಸೇರಿದಾಗ "ಅಂತಾರಾಷ್ಟ್ರಿಯ" ಎಂದಾಗಬೇಕು. ಸಂಸ್ಕೃತದ ಪದಗಳೇ ಆಗಿರುವುದರಿಂದ ಅದರ ವ್ಯಾಕರಣವನ್ನೇ ಇಲ್ಲಿ ಅವಲಂಬಿಸಬೇಕು. ವಸ್ತುತಃ ಅಂತಃ + ರಾಷ್ಟ್ರಿಯ - ಅಂತಾರಾಷ್ಟ್ರಿಯವಾಗುತ್ತದೆ - ವಿಸರ್ಗ ಸಂಧಿಯ ನಿಯಮದಿಂದ. ವಿಸರ್ಗ ಪೂರ್ವಪದದ ಅಂತ್ಯದಲ್ಲಿದ್ದು ರ-ಕಾರ ಉತ್ತರಪದದ ಆದಿಯಲ್ಲಿ ಬಂದಾಗ ಹೀಗೆ ವಿಸರ್ಗದ ಹಿಂದಿನ ಸ್ವರದ ದೀರ್ಘ ರೂಪ ಆದೇಶವಾಗಿ ಬರುತ್ತದೆ. ಉದಾಹರಣೆಗೆ - ಪುನಃ + ರಚನೆ - ಪುನಾರಚನೆ ಯಾಗುತ್ತದೆ. ಪುನರ್ರಚನೆಯಲ್ಲ. ದೈನಂದಿನ ಪತ್ರಿಕೆಗಳಲ್ಲಿ ಪುಸ್ತಕಗಳಲ್ಲಿ ಈ ರೀತಿಯ ಭಾಷೆಯ ತಪ್ಪುಗಳನ್ನು ನೋಡಿದಾಗ ಸ್ವಲ್ಪ ಖಿನ್ನನಾಗುತ್ತೇನೆ.

ಆದರೆ ರೂಢಿ ಎಂಬುದೊಂದಿದೆಯಲ್ಲ! ಇದು ಎಷ್ಟು ಶಕ್ತ ಎಂದು ಈ ರೀತಿಯ ಅಪಪ್ರಯೋಗಗಳನ್ನು ನೋಡಿದಾಗ ತಿಳಿಯುತ್ತದೆ. ಈಗ ಯಾರನ್ನದರೂ ಕೇಳಿ ನೋಡಿ - ಬಹಳಷ್ಟು ಜನ ಸುಸ್ವಾಗತ ಎಂಬುದು ಸರಿಯಾದ ಪದ ಎಂದೇ ಹೇಳುತ್ತಾರೆ. ಪತ್ರಿಕೆಗಳಲ್ಲಿ ದೂರದರ್ಶನವಾಹಿನಿಗಳಲ್ಲಿ ಸರಿಯಾದ ಪದ ಪರಿಚಯ ಮಾಡಿಸುವ ಅಭ್ಯಾಸ ಮೂಡಿಬರಬೇಕು.

ನಾನೇನೂ ಪಂಡಿತನಲ್ಲ. ಮೊದಲು ಹೇಳಿದ ಶಬ್ದಗಳ ಬಗ್ಗೆ ನಾನೂ ಮೊದಲು ತಪ್ಪು ಮಾಡಿದ್ದವನೇ! ಆದರೆ ಸರಿಯಾದ ಉಪಯೋಗ ತಿಳಿದ ಮೇಲೆ ಆದಷ್ಟು ಸರಿಯಾಗಿಯೇ ಮಾಡೋಣ ಎಂದು ನಿರ್ಧರಿಸಿದ್ದೇನೆ.

ಅರಿ-ಸಮಾಸದ "ದುರ್ಬಳಕೆ"ಯೂ ಇದೆ. ಇದರ ಬಗ್ಗೆ ಇನ್ನೊಮ್ಮೆ ಸಮಯ ಸಿಕ್ಕಾಗ ಬರೆಯುತ್ತೇನೆ.

|| ಇತಿ ಶಮ್ ||

2 comments:

Anonymous said...

[ Being on a Mac makes it hard to read kannada and impossible to write; please pardon the english :) ]

It is heartening that I'm not alone in feeling a little twinge everytime someone goes "aMtArrAShTrIya" but I console myself by counting the number of people that are familiar with "DralOpe pUrvasya dIrghONaH".

I'm ambivalent about arisamAsa, though; I think it's discouraged partly for stylistic reasons and partly for convenience than for any strong grammatical reasons, so I'm inclined to wink at it :)

But "ಸರಿಯಾದ ಉಪಯೋಗ ತಿಳಿದ ಮೇಲೆ ಆದಷ್ಟು ಸರಿಯಾಗಿಯೇ ಮಾಡೋಣ ಎಂದು ನಿರ್ಧರಿಸಿದ್ದೇನೆ. "
is laudable indeed. Brings to mind how the venerable A. R. Krishna Shastri's approach to writing. I coudn't agree more with you there.

V.

Anonymous said...

ಪಾರಿಜಾತರವರ ದಯೆಯಿಂದ ತಮ್ಮ ಈ ಬರಹ ಓದುವಂತಾಯಿತು.

ಚೆನ್ನಾಗಿ ಬರೆದಿದ್ದೀರಿ.

ಕೆಲ ತಲೆಮಾರ ಹಿಂದೆ ನಮ್ಮ ಹಿರಿಯರು ಸ್ವಲ್ಪ ಅತಿ ಎನ್ನಿಸುವಂಥ ಮಡಿವಂತಿಕೆ ಪಾಲಿಸುತ್ತಿದ್ದರು. ಸಮುದ್ರೋಲ್ಲಂಘನಕ್ಕೂ ಪ್ರಾಯಶ್ಚ್ಚಿತ್ತವಿತ್ತು. ಇತರ ನಾಗರಿಕತೆ, ಸಂಸ್ಕ್ರತಿಗಳಿಗೆ ನಮ್ಮ exposure ಇಲ್ಲದುದರಿಂದ ನಮ್ಮ ಬೆಳವಣಿಗೆ ಕುಂಠಿತವಾಯಿತು.

ಸಂಸ್ಕ್ರತದಂಥ ’ಪರಿಪೂರ್ಣ’ ಭಾಷೆ ಸಹ ಕಾಲನ ಕಾಲಿಗೆ ಸಿಕ್ಕಿ ಅದರ ಬಳಕೆ ಕಡಿಮೆಯಾಯಿತು ಎಂದಾಗ ಉಳಿದ ಭಾಷೆಗಳ ಭವಿಷ್ಯವೇನು?

ನನಗನ್ನಿಸುತ್ತಿದೆ: ಭಾಷೆಯು dynamic ಆಗಿರದೆ, ತುಂಬಾ ಕಟ್ಟುಪಾಡು, ನಿಯಮಗಳನ್ನು, ಮಡಿವಂತಿಕೆಯನ್ನು ಹೊಂದಿದ್ದರೆ ಅದರ ಬೆಳವಣಿಗೆ ಬಹಳ ಕುಂಠಿತವಾಗುತ್ತದೆ.

ಎಲ್ಲೋ ಓದಿದ ನೆನಪು: The dialect which is closer to the written language reflects the higher level of culture of the people speaking it. ಉದಾಹರಣೆಗೆ ದಕ್ಷಿಣ ಕನ್ನಡದವರಾಡುವ ಕನ್ನಡ.

ಯಾವುದೇ ಭಾಷೆಯ ಸ್ಥಿತಿಗತಿಗಳು ಅದನ್ನಾಡುವ ಜನರ, ಜನಜೀವನವನ್ನು ಬಿಂಬಿಸುತ್ತವೆ. ಜನರು ಸಾಹಸಿಗಳಾಗಿ, ಜಗವನ್ನೇ ಮೆಚ್ಚಿಸಿ ಗೆಲ್ಲಬಲ್ಲವರಾದರೆ, ಅವರೊಂದಿಗೆ ಅವರ ಭಾಷೆ ಕೂಡಾ ಮನ್ನಿಸಲ್ಪಡುತ್ತದೆ. ಈ ದಿಸೆಯಲ್ಲಿ ತಮ್ಮಂತಹ ಹಾಗೂ NRI ಗಳ ಕನ್ನಡ ಪ್ರೇಮ ಕನ್ನಡಕ್ಕೆ ಇನ್ನೂ ಸ್ವಲ್ಪ ಹೆಚ್ಚಿನ ಆಯುಷ್ಯ, ಬಲ ಕೊಡಬಹುದು.

ಇತ್ತೀಚೆಗೆ, ಈ ಪುಟಗಳಲ್ಲಿ, ಒಂದು ಹೊಸ (ಅರಿಸಮಾಸ ?)ಕುತೂಹಲಕಾರಿ ಶಬ್ದದ ಹುಟ್ಟು ಆಯಿತು: ವೀರ್ಯಾಳು ಎಂದು. ಇದು ಸರಿಯೋ ತಪ್ಪೋ ಎನ್ನುವುದು ಅಮುಖ್ಯ -- ಎಷ್ಟು ಜನಕ್ಕೆ ಈ ಹೊಸ ಪದ ಹಿಡಿಸುತ್ತದೆ, ತಮ್ಮ ವ್ಯವಹಾರಗಳಲ್ಲಿ, ಬರಹಗಳಲ್ಲಿ, ಮಾತುಕತೆಗಳಲ್ಲಿ ಈ ಪದವನ್ನು ಆಗಾಗ ಬಳಸುತ್ತಾರೆ ಎಂಬುದರ ಮೇಲೆ ಈ ಪದದ ಆಯುಷ್ಯ, ಭವಿಷ್ಯಗಳು ನಿರ್ಧಾರವಾಗುತ್ತವೆ.

ಪದವೊಂದಕ್ಕೆ ಅನ್ವಯಿಸುವದೇ ಭಾಷೆಗೂ ಸಹ!