Wednesday, April 12, 2006

ಅಣ್ಣಾವ್ರು ಇನ್ನಿಲ್ಲ

ಒಂದೆರಡು ಘಂಟೆಗಳ ಹಿಂದೆ ಬಂದ ಸುದ್ದಿ. ವರನಟ ರಾಜಕುಮಾರ್ ಅವರು ದಿವಂಗತರಾಗಿದ್ದಾರೆ. ನಂಬಲು ಸಾಧ್ಯವೇ ಆಗುತ್ತಿಲ್ಲ. ಚಿಕ್ಕಂದಿನಿಂದ ಅವರು ನನ್ನ "ಗುರು" ಆಗಿದ್ದರು. ಆಗ ಬಿಡುಗಡೆಯಾಗುತ್ತಿದ್ದ ಎಲ್ಲ ಚಿತ್ರಗಳನ್ನೂ ನೋಡುತ್ತಿದ್ದೆ. ಬಿಡದೆ. ಅವರು ಅದ್ಬುತನಟನಾಸಾಮರ್ಥ್ಯ ಎಂಥವರನ್ನೂ ಸೆಳೆಯಲು ಸಮರ್ಥವಾಗಿತ್ತು. ಇದರ ಜೊತೆಗೆ ರಾಜ್ ಕುಮಾರ್ ಇರುವ ಚಿತ್ರವೆಂದರೆ ಸದಭಿರುಚಿಯ ಚಿತ್ರ, ಚೆನ್ನಾಗಿರುತ್ತದೆ ಎಂಬ ಖಾತ್ರಿ. ಅವರ ಚಿತ್ರದ ಅಂಟು ಚೀಟಿಗಳನ್ನು ಮನೆಯಲ್ಲಿ ಸಂಗ್ರಹಿಸಿ ಕಪಾಟಿನ ಮೇಲೆ ಕಿಟಕಿಯ ಗಾಜಿನ ಮೇಲೆಲ್ಲಾ ಅಂಟಿಸುತ್ತಿದ್ದೆ. ಅವರನ್ನು ಬೈದರೆ ಕೋಪ ಬಂದುಬಿಡುತ್ತಿತ್ತು. ಅಷ್ಟು ಇಷ್ಟ ನನಗೆ ಅವರನ್ನು ಕಂಡರೆ. ಇಂದಿಗೂ ಅಷ್ಟೆ.

ಕಸ್ತೂರಿ ನಿವಾಸ, ಬೇಡರ ಕಣ್ಣಪ್ಪ, ಭೂಕೈಲಾಸ, ಒಂದು ಮುತ್ತಿನ ಕಥೆ, ಬಂಗಾರದ ಮನುಷ್ಯ, ಜೀವನ ಚೈತ್ರ - ಹೇಳಲು ಹೊರಟರೆ ಇನ್ನೂರು ಚಿತ್ರಗಳು. ಎಲ್ಲವೂ ಸದಭಿರುಚಿಯ ಒಳ್ಳೆಯ ಚಿತ್ರಗಳು. ಅವರ ನಟನೆಯೇ ಅಲ್ಲದೆ ಅವರ ಕಂಠಸಿರಿ ಕೂಡ ಜನರ ಮನಗಳನ್ನು ಸೂರೆಗೊಂಡಿತ್ತು. ಕಛೇರಿಯಿಂದ ಮನೆಗೆ ಬರುವಾಗ ಬಾನುಲಿಯಲ್ಲಿ ಅವರದೇ ಭಕ್ತಿಗೀತೆಗಳ ಧ್ವನಿಮುದ್ರಿಕೆಯ ಪ್ರಸಾರ ನಡೆದಿತ್ತು. ಚಿಕ್ಕಂದಿನಿಂದ ಕೇಳುತಿದ್ದ ಆ ಧ್ವನಿಯ ಹಿಂದಿನ ಚೈತನ್ಯ ನಮ್ಮಿಂದ ದೂರ ಹೋದ ಅರಿವಾಗಿ ಮನಸ್ಸಿಗೆ ಬಹಳ ದುಃಖವಾಯಿತು. ಏನನ್ನೋ ಕಳೆದುಕೊಂದ ಭಾವನೆ ಎಲ್ಲೆಡೆ ಪಸರಿಸಿತು.

ಆದರೆ ಮನುಷ್ಯರು ಎಂದಾದರೂ ಮಡಿಯಲೇ ಬೇಕಲ್ಲವೆ? ಶರೀರವು ತನ್ನ ಧರ್ಮವನ್ನು ಪಾಲಿಸಿದೆ. ಮಣ್ಣಿನಿಂದ ಹುಟ್ಟಿ ಮಣ್ಣು ಸೇರುತ್ತಿದೆ.

ಅವರು ವಿಶೇಷವಾಗಿ ಎರಡು ಚಿತ್ರಗಳಲ್ಲಿ ನಟಿಸಲು ಆಸೆ ಪಟ್ಟಿದ್ದರು. ನೃಪತುಂಗ ಮತ್ತು ಭಕ್ತ ಅಂಬರೀಷ ಎಂಬ ಎರಡು ಚಿತ್ರಗಳಲ್ಲಿ. ನನಗೂ ಅದನ್ನು ನೋಡುವ ಕುತೂಹಲವಿದ್ದಿತು. ದುರದೃಷ್ಟವಶಾತ್ ಅವರಿಗೂ ಅವರ ಅಭಿಮಾನಿಗಳಾದ ಹಲವರಿಗೂ ಈ ಆಸೆ ಕೈಗೂಡಲಿಲ್ಲ.

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ನನ್ನ ಪ್ರಾರ್ಥನೆ. ಅವರ ಕುಟುಂಬದ ಜನರಿಗೂ ಶಕ್ತಿ ನೀಡಲಿ.

No comments: