Monday, June 06, 2005

ನಾ ನೋಡಿದ ಚಲನಚಿತ್ರ - ಮಿತ್ರಚಿತ್ರದ ಬೇರು

-----Beru (The Root)-----

ನಿನ್ನೆ ನಾನು ಬಹಳ ಒಳ್ಳೆಯ ಕೆಲಸ ಮಾಡಿದೆ. ನನಗೆ ತಿಳಿದಿರುವ ಚಿತ್ರರಂಗದ ವ್ಯಕ್ತಿಯೊಬ್ಬರು "ಬೇರು" ಚಿತ್ರದ ಪ್ರದರ್ಶನವಿದೆ, ಅದನ್ನು ನೋಡಬಹುದೆಂದು ಹೇಳಿದರು. ನಮ್ಮ ತಂದೆ ಮತ್ತು ನಾನು ಚಿತ್ರವನ್ನು ನೋಡಿ ಬಂದೆವು.

ಇದು ಯಾವ ಸೀಮೆ ಒಳ್ಳೆಯ ಕೆಲಸ? ಸ್ವಾಮಿ, ಒಳ್ಳೆಯ ಕನ್ನಡ ಚಿತ್ರ ಸಿಗುವುದು,ಅದನ್ನು ನೋಡುವುದು ಪುಣ್ಯದ ಕೆಲಸವಲ್ಲವೇ? ಪುಣ್ಯದ ಕೆಲಸ ಒಳ್ಳೆಯದಲ್ಲವೇ? ಹಾಗೆ ನನ್ನ ಕೆಲಸ ಒಳ್ಳೆಯದೇ!

ನಾನು ಇತ್ತೀಚೆಗೆ ನೋಡಿದ ಚಿತ್ರಗಳಲ್ಲಿ ಎದ್ದು ಕಾಣುವಂಥ ಚಿತ್ರ ಪಿ. ಶೇಷಾದ್ರಿಯವರ ನಿರ್ದೇಶನದ ಮಿತ್ರಚಿತ್ರ ಸಂಸ್ಥೆ ನಿರ್ಮಾಣದ ಬೇರು. ಇಲ್ಲಿ ಬೇರು ಎನ್ನುವುದು ನಮ್ಮ ಸಮಾಜದಲ್ಲಿ ಆಳವಾಗಿ ಊರಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು. ಕರಡಿಪುರವೆಂಬ ಕಾಲ್ಪನಿಕ ಸ್ಥಳದಲ್ಲಿ ಈ ಕಥೆ ಮೂಡಿಬರುತ್ತದೆ. ಒಂದು ಸರ್ಕಾರಿ ಕಛೇರಿಯಲ್ಲಿ ನಡೆಯಬಹುದಾದ ಸಂಗತಿಯಿದು. ನಡೆದೂ ಇದೆ ಎಂದು ಕಥೆಗಾರರು ನಂತರ ತಿಳಿಸಿದರು.

ಕಥೆಯ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ. ಇದರ ಜೊತೆಗಿನ link ನೋಡಿದರೆ ತಿಳಿಯುತ್ತದೆ. ಆದರೆ ಚಿತ್ರ ನೋಡಿದ ಅನುಭವ ಒಂದು ವಿಶಿಷ್ಟ ಬಗೆಯದು. ಕಥೆಯಲ್ಲಿ ಹಲವಾರು ಸಂಕೇತಗಳು ಕಾಣುತ್ತವೆ. ಚಿತ್ರದ ತಾಣ ಚೆನ್ನಾಗಿದೆ. ದೇವರಾಯನದುರ್ಗದ ಬಳಿ ಚಿತ್ರ ತೆಗೆದಿದ್ದಾರೆ. ಸುಚೇಂದ್ರ ಪ್ರಸಾದ್ ಸರ್ಕಾರಿ ಅಧಿಕಾರಿ ರಘುನಂದನ್ ಆಗಿ ನಟಿಸಿದ್ದಾರೆ. ಇವರ ಅಭಿನಯವನ್ನು ನಾನು ಮುಂಚೆ ಅಷ್ಟು ಮೆಚ್ಚಿರಲಿಲ್ಲ. ಇದಕ್ಕೆ ಕಾರಣ ಇವರ ವೇಗದ ಮಾತನಾಡುವಿಕೆ. ಆದರೆ ನನಗೆ ಅಚ್ಚರಿ ಮೂಡುವಂತೆ ಒಬ್ಬ ಸಂವೇದನಾಶೀಲ ಮತ್ತು ಪ್ರಾಮಾಣಿಕ ಅಧಿಕಾರಿಯ ಪಾತ್ರಕ್ಕೆ ಸುಚೇಂದ್ರ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಅಧಿಕಾರಿ ಕಾಣುತ್ತಾರೆಯೇ ಹೊರತು ನಟ ಕಾಣುವುದಿಲ್ಲ.

ಗೊರವಯ್ಯನ ಪಾತ್ರದಲ್ಲಿ ಬಹಳ ಚೆನ್ನಾಗಿ ಅಭಿನಯ ನೀಡಿರುವರು ಕನ್ನಡ ಚಿತ್ರರಂಗದ ಪರಿಚಿತರೇ. ನನಗೆ ಸದ್ಯಕ್ಕೆ ಇವರ ಹೆಸರು ಜ್ಞಾಪಕಕ್ಕೆ ಬರುತ್ತಿಲ್ಲ. ಇವರ ಜೊತೆಗೆ ದತ್ತಾತ್ರೇಯ ಒಬ್ಬ ಸಂಸಾರ ಪೀಡಿತ ಮುಖ್ಯಗುಮಾಸ್ತನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅವರ ಮುಖದ ಒಂದು ನೋಟ ನೋಡಿದರೆ ಆ ಗುಮಾಸ್ತನ ಪಾತ್ರವನ್ನೆಲ್ಲ ಭಟ್ಟಿ ಇಳಿಸಿರುವಂತಿತ್ತು. ಇವರು ಅದ್ಭುತ ನಟರು - ಎಂಥ ಪಾತ್ರಕ್ಕಾದರೂ ಜೀವ ತುಂಬಬಲ್ಲ ನುರಿತವರು. ಇವರ ಜೊತೆಗೆ ಸಹಾಯಕ ಅಭಿನಯವರ್ಗ ಕೂಡ ಚೆನ್ನಾಗಿ ನಟಿಸಿದ್ದ್ದಾರೆ. ಕಥೆಗಾರರಾದ ಪ್ರಹ್ಲಾದ್ ರವರು ಒಳ್ಳೆಯ ಕಥೆಯನ್ನು ಹೆಣೆದಿದ್ದಾರೆ. ಸಂಭಾಷಣೆಯೂ ಇವರದೇ. ಚಿತ್ರದಲ್ಲಿ ಒಂದು ನಿಮಿಷವಾದರೂ ಕಥೆ ಸಡಿಲವಾಗುವುದಿಲ್ಲ. ಈ ಬಿಗಿಯಾದ ನಿರೂಪಣೆ ಈ ಚಿತ್ರದ ಹೆಗ್ಗುರುತುಗಳಲ್ಲಿ ಒಂದು. ಸಂಭಾಷಣೆ ಸೂಕ್ತವಾಗಿ ಉಚಿತವಾಗಿದೆ. ಛಾಯಾಗ್ರಹಣ ಸಮರ್ಪಕವಾಗಿದೆ.ಒಂದೆರಡು ಜಾನಪದ ಗೀತೆಗಳ ಶೈಲಿಯಲ್ಲಿ ಮೂಡಿರುವ ಹಾಡುಗಳಿಗೆ ಪ್ರವೀಣ್-ಕಿರಣ್ ಒಳ್ಳೆಯ ಸಂಗೀತ ನಿರ್ದೇಶನ ನೀಡಿದ್ದಾರೆ.

ಹೀಗೆ ಒಂದು ಅಚ್ಚುಕಟ್ಟಾದ package ಈ ಚಲನಚಿತ್ರ.

ಆದರೆ ವಿಶಾದದ ಸಂಗತಿ ಬರುವುದೇ ಈಗ. ಈ ತಂಡದ ಹಿಂದಿನ ಎರಡು ಚಿತ್ರಗಳು ಮುನ್ನುಡಿ ಮತ್ತು ಆತಿಥಿ. ಎರಡೂ ಚಿತ್ರಗಳು ರಾಷ್ಟ್ರಪ್ರಶಸ್ತಿ ಗಳಿಸಿವೆ. ಇಂಥ ಸದಭಿರುಚಿಯ ಚಿತ್ರಗಳನ್ನು ಮಾಡಿದ ತಂಡಕ್ಕೆ ಹಾಕಿದ ದುಡ್ಡು ಕೈಗೆ ಸಿಗುವುದಿಲ್ಲವೆಂದರೆ ವಿಶಾದದ ಸಂಗತಿಯಲ್ಲವೇ? ನಾನು ನೋಡಿದ ಪ್ರದರ್ಶನ ಕೂಡ ಚಿತ್ರದ ತಂಡದವರು ಆಯೋಜಿಸಿದ್ದಾಗಿತ್ತು. ಅವರಿಗೆ ಆಸೆ - ಜನರು ಬಂದು ತಮ್ಮ ಚಿತ್ರವನ್ನು ನೋಡಲಿ ಎಂದು. ಅವರೇ ದುಡ್ಡು ಹಾಕಿ ಒಂದು ಸಣ್ಣ ಚಿತ್ರಮಂದಿರವನ್ನು ಒಂದು ಪ್ರದರ್ಶನದ ಮಟ್ಟಿಗೆ ಬಾಡಿಗೆ ಪಡೆದು ಜನರನ್ನು ಅವರೇ ಆಹ್ವಾನಿಸಿ ಕಾಫಿ-ಟೀ ಕೊಟ್ಟು ತೋರಿಸುವ ಪರಿಸ್ಥಿತಿ ಬಂದಿದೆ. ಇಷ್ಟು ಒಳ್ಳೆಯ ತಂಡ ಅಮೇರಿಕದಲ್ಲಿದ್ದಿದ್ದರೆ ? ಅಥವಾ ನಮ್ಮ ನೆರೆಯೆ ತಮಿಳುನಾಡಿನಲ್ಲಿ ಅಥವಾ ಕೇರಳದಲ್ಲಿದ್ದಿದ್ದರೆ ? ಅವರನ್ನು ಗಗನಕ್ಕೇರಿಸಿ ನಂತರ ನಮ್ಮ ಕನ್ನಡದವರೂ ದುಡ್ಡು ತೆತ್ತು ನೋಡುತ್ತಿದ್ದರು!

ಈ ತಂಡ ಧನವಂತವಲ್ಲ. ಆದ್ದರಿಂದ ಪಿ.ವಿ.ಆರ್ ಮಂದಿರದಲ್ಲಿ ಒಂದು ವಾರ ಈ ಚಿತ್ರ ಹಾಕಿದ್ದರು. ಆದರೆ ದುರದೃಷ್ಟವಶಾತ್ ಈ ಚಿತ್ರ ಓಡಿದ್ದು ಅಷ್ಟೇ! ಜನರು - ವಿಶೇಷವಾಗಿ ಕನ್ನಡಿಗರು - ದುಡ್ಡು ತೆತ್ತು ಚಿತ್ರನೋಡುವ ಹವ್ಯಾಸ ರೂಢಿಸಿಕೊಂಡಿಲ್ಲ. ಕಳಪೆ ಚಿತ್ರಗಳನ್ನು ನೋಡುತ್ತಾರೆ. ಈ ರೀತಿಯ ಚಿತ್ರಗಳನ್ನು ನೋಡುವುದಿಲ್ಲವಲ್ಲಾ ಎನ್ನುವುದು ನನ್ನ ಕೊರಗು.

ಅಮೇರಿಕದಲ್ಲಿ ಸ್ವಲ್ಪ ಓದಿದವರ proportion ಹೆಚ್ಚು. ಈ ಚಿತ್ರಗಳನ್ನು ಅಲ್ಲಿ ತೋರಿಸಿದರೆ ಇವರಿಗೆ ಸ್ವಲ್ಪ ಅಸಲಾದರೂ ಉಳಿದು ಮುಂದಿನ ಚಿತ್ರ ಮಾಡಲು ಸ್ವಲ್ಪ ಹುಮ್ಮಸ್ಸು ಉತ್ಸಾಹವಾದರೂ ಇರಲಿ ಎನ್ನುವುದು ನನ್ನ ಆಸೆ.

ಇದನ್ನು ಓದಿದವರು ದಯವಿಟ್ಟು ಶೇಷಾದ್ರಿಯವರ ಸಂಪರ್ಕಮಾಡಿರಿ. ನಿಮ್ಮಲ್ಲಿಯೂ ಪ್ರದರ್ಶನದ ಆಯೋಜನೆ ಮಾಡಬಹುದು.

|| ಇತಿ ಶಮ್ ||

No comments: