Friday, February 11, 2005

6 Karnataka cops killed in a naxalite bomb attack

6 Karnataka cops killed in a naxalite bomb attack

ನೋಡಿದಿರಾ ? ನಕ್ಸಲೀಯರನ್ನು ಕಂಡರೆ ನನೆಗೆ ಆಗದು ಎಂದು ಬರೆದಿದ್ದೆ. ಅದಕ್ಕೆ ಸರಿಯಾಗಿ ಈಗ ಆರು ಪೋಲೀಸರನನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದಾರೆ. ಕೊಲ್ಲುವೆ ಬಗೆ ನೋಡಿ. ak-47 ಕೈಯಲ್ಲಿ ಹಿಡಿದು ಬಾಂಬುಗಳು ಗ್ರಿನೇಡುಗಳನ್ನು ಸಹ ಉಪಯೋಗಿಸಿದ್ದಾರೆ. ಇಂಥವರು "ಸಮಾಜ-ಸುಧಾರಕರೇ" ? ಈ "ಪ್ರೇಮ್" ಅನ್ನುವವನ ಬಗ್ಗೆ ನನಗೆ ಆಗ ಆಗಿದ್ದ ಸಹಾನುಭೂತಿ ಈಗ ಕರಗಿಹೋಗಿದೆ. ಈ ಜವಹರಲಾಲ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಗಳಲ್ಲಿ ಹಲವರು ತಪ್ಪು ದಾರಿ ಹಿಡಿದಿದ್ದಾರೆ. ನೇಪಾಳದಲ್ಲಿ ಮಾವೋಗಳ ಮುಖಂಡ, ನಮ್ಮ ದೇಶದಲ್ಲಿ ಹಲವು ಎಡಬಣಿಗರೂ ಅಲ್ಲೇ ಓದಿದ್ದರು.

ಸಾಕೇತನ ಸಾವನ್ನು ಖಂಡಿಸಿ ಬಂದಿದ್ದ "ಗದರ್" ಅನ್ನುವವನು ಕರ್ಣಾಟಕ ಸರ್ಕಾರಕ್ಕೆ ಬೆದರಿಕೆ ನೀಡಿದ್ದ. ಆಗ ಅವನನ್ನು ಅಲ್ಲೇ ದಸ್ತಗಿರಿಯೇಕೆ ಮಾಡಲಿಲ್ಲ ? ರಾಜಾರೋಷವಾಗಿ "ಬಂದೂಕಿನಿಂದ ಉತ್ತರ ಬರುತ್ತದೆ" ಅನ್ನುವವನನ್ನು ಸೆರೆಹಿಡಿಯಲು ನಮ್ಮ ಪೋಲೀಸರು ಅಸಮರ್ಥರೇ ? ಪ್ರತಿಭಾವಂತ ವಿದ್ಯಾರ್ಥಿಗಳು ಎಡಬಣಕ್ಕೆ ಹೋಗುವುದು ಅತ್ಯಂತ ಶೋಚನೀಯ ಪರಿಸ್ಥಿತಿ. ಏಕೆಂದರೆ ಇವರು ವಿದ್ಯಾವಂತರಾಗಿ ಕೂಡ ಏನೂ ಪ್ರಯೋಜನಕ್ಕೆ ಬಾರದವರಾಗಿ, ಮೈಯಲ್ಲಿ ವಿಷ ತುಂಬಿಕೊಂಡು ತಮಗೆ ಹಾಗೂ ಸಮಾಜಕ್ಕೆ ಘಾತಕರಾಗಿ ಪರಿಣಮಿಸುತ್ತಾರೆ.

ವಿಜಯಕರ್ಣಾಟಕ ಪತ್ರಿಕೆಯಲ್ಲಿ ಒಬ್ಬರು ವಿಜಯ್ ಪ್ರತಾಪ್ ಎಂಬುವವರು ಬಹಳ ಚೆನ್ನಾಗಿ ಈ ವಿಷಯವನ್ನು ನಿರೂಪಿಸಿದ್ದಾರೆ. ಆಂಧ್ರದಲ್ಲಿ ಈಗ ಸರ್ಕಾರ ರಾಜಕೀಯ ಒತ್ತಡದಿಂದ ಸುಮ್ಮನೆ ಕೂರುವಂತೆ ಆಗಿದೆ. ಜೊತೆಗೆ ನಕ್ಸಲರು ಒಟ್ಟುಗೂಡುತ್ತಿದ್ದಾರೆ. ಇವರಿಗೆ ಆಧುನಿಕ ಶಸ್ತ್ರಾಸ್ತ್ರಗಳು ಎಲ್ಲಿಂದ ಸರಬರಾಜಾಗುತ್ತಿದೆ ? ಇದು ತಿಳಿದಿರುವ ವಿಷಯವೇ ! ಚೀನಾ ಮತ್ತು ಪಾಕಿಸ್ತಾನಗಳು ಭಾರತದ ಮೇಲೆ ಗಿಡುಗನ ದೃಷ್ಟಿಯನ್ನಿಟ್ಟಿವೆ. ನಮ್ಮ ಸರ್ಕಾರದಲ್ಲಿ ಇದನ್ನು ಗಮನಿಸುವವರಿದ್ದಾರೆ. ಆದರೆ ಕ್ರಮ ಬೇಗ ಕೈಗೊಳ್ಳದಿದ್ದರೆ ಕರ್ಣಾಟಕವೂ ಆಂಧ್ರದ ದಾರಿಯನ್ನು ಹಿಡಿಯಬೇಕಾದೀತು.

ವಿಜಯ ಪ್ರತಾಪ್ ಈ ಸಾಕೇತನ ವಿದ್ಯೆಯನ್ನೂ ಡಾ|| ಸುದರ್ಶನರ ವಿದ್ಯೆಯನ್ನೂ ಅವುಗಳ ಉಪಯೋಗವನ್ನು ಬಹಳ ಉಚಿತವಾಗಿ ಹೋಲಿಸಿ ಬರೆದಿದ್ದಾರೆ. ಇಬ್ಬರೂ ಸಮಾಜದ ಬಗ್ಗೆ ಕಳಕಳಿಯನ್ನು ಹೊತ್ತವರಾಗಿಯೂ ಸಹ ಒಬ್ಬರು ಒಂದು ಜನಾಂಗವನ್ನು ಉದ್ಧಾರ ಮಾಡಿದರು. ಇನ್ನೊಬ್ಬರು ಒಂದು ಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತಾ ಪ್ರಾಣ ಬಿಟ್ಟರು.

ಅಲ್ಲ, ನಮ್ಮ ಸರ್ಕಾರ ನಕ್ಸಲರ ವಿರುದ್ಧ ಕ್ರಮಕೈಗೊಂಡದ್ದಕ್ಕೆ ವಿರೋಧವ್ಯಕ್ತಪಡಿಸಿ, ಸತ್ತ ನಕ್ಸಲರ ಬಗ್ಗೆ ಕಣ್ನೀರು ಸುರಿಸಿದ "ಸಾಹಿತಿ"ಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ವಸ್ತುಸ್ಥಿತಿಯನ್ನರಿಯದ ಸಾಹಿತಿ ಬಹಳ ಅಪಾಯಕಾರಿ. ಅರುಂಧತೀ ರಾಯ್ ಮತ್ತು ನಮ್ಮ ಅನಂತಮೂರ್ತಿ-ಕಾರ್ನಾಡರೇ ಇದಕ್ಕೆ ಸಾಕ್ಷಿ. ಮಧ್ಯದಲ್ಲಿ ಈ ಗೌರಿ ಲಂಕೇಶ್ ಬೇರೆ. ಜೊತೆಗೆ "ಹಾಯ್ ಬೆಂಗಳೂರ್" ಖ್ಯಾತಿಯ ರವಿ ಬೆಳಗೆರೆ ಕೂಡ ನಕ್ಸ್ಲರನ್ನು ಸಮರ್ಥಿಸಿದ್ದರು. ಏಕೆ ಇವರೆಲ್ಲರೂ ಹೀಗೆ ? ಐಷಾರಾಮದ ಜೀವನವನ್ನು ನಡೆಸುವುದಕ್ಕೆ ಬಡವರ ರಕ್ತವನ್ನು ಹೀರುವ ವಸಾಹತುಶಾಹಿಗಳಿಗೂ - ಬಡವರ ಭಾವನೆಗಳೊಂದಿಗೆ ಆಟವಾಡಿ ದುಡ್ಡು ಮಾಡಿ ಐಷಾರಾಮದ ಜೀವನ ನಡೆಸುವ ಈ ಬಗೆಯ ಸಾಹಿತಿಗಳಿಗೂ ಏನೂ ವ್ಯತ್ಯಾಸವಿಲ್ಲ.

ಕಮ್ಯೂನಿಸ್ಟರು ಎಲ್ಲಿದ್ದರೂ ಜನಪರರಾಗಿ ತೋರಿಕೊಂಡು ಜನವಿರೋಧಿಗಳಾಗಿರುತ್ತಾರೆ. ನಮ್ಮ ದೇಶದಲ್ಲಿ ಚೀನಾ ಮತ್ತು ರಷ್ಯಾ ದೇಶಗಳ ಕಮ್ಯೂನಿಸ್ಟರನ್ನು ಹೇಗೆ ಆರಾಧಿಸುತ್ತಾರೆ ನೋಡಿದ್ದೀರಾ ? ಒಬ್ಬ ಧುರೀಣ ತನ್ನ ಮಗನಿಗೆ ಮಿಲಿಯಗಟ್ಟಲೆ ಜನರನ್ನು ಸಾಯಿಸಿ ಹಿಟ್ಲರ್ ಗಿಂತ ಕ್ರೂರಿಯೆನಿಸಿಕೊಂಡ ಸ್ಟಾಲಿನ್ ಹೆಸರನ್ನಿಟ್ಟಿದ್ದಾನೆ. ಇವರಿಗೆ ತಲೆಯಿಲ್ಲವೇ ? ಊಟಕ್ಕೆ ಏನು ತಿನ್ನುತ್ತಾರೆ ? ಇಲ್ಲಿ ಚೀನಾದ ಮಾವೋ ಮತ್ತು ಲೆನಿನ್ ರನ್ನು ದೇವತೆಗಳ ರೀತಿ ಆರಾಧಿಸುತ್ತಾರೆ. ಬೇರೆ ಧರ್ಮಗಳಿಗಿಂತ ಹೆಚ್ಚು ಮತಾಂಧವಾದ ಧರ್ಮ ಈ ಕಮ್ಯೂನಿಸಮ್. ಮಾರ್ಕ್ಸನೇ ಕೊನೆಯಲ್ಲಿ ಹೇಳಿದ್ದ - ನಾನು ಮಾರ್ಕ್ಸ್ ವಾದಿಯಲ್ಲವೆಂದು. ವಾದ ಮಾಡಿದವನೇ ತನ್ನ ತಪ್ಪನ್ನರಿತು ವಾದದಲ್ಲಿ ಹುರುಳಿಲ್ಲವೆಂದಾಗ - ಅದಕ್ಕೆ ಆ ವಾದಕ್ಕೆ ಉರುಳು ಹಾಕಿಕೊಳ್ಳಲು ಸಿದ್ಧವಾಗಿರುವ ನಮ್ಮ ಬುದ್ಧಿಗೇಡಿ ಕಾಮ್ರೇಡರ ಬಗ್ಗೆ ಏನು ಹೇಳಲಾದೀತು?

ಬಹಳ ಕೋಪ ಬಂದಿದೆ ನನಗೆ. ಕರ್ಣಾಟಕವನ್ನು ಆಂಧ್ರ ಮಾಡಲು ಹೊರಟಿದ್ದಾರಲ್ಲಾ ಎಂದು. ನಿಧಾನವಾಗಿ ಯೋಚಿಸಿ ಇನ್ನೊಮ್ಮೆ ಏನಾದರೂ ಬರೆಯುತ್ತೇನೆ.

ಮೃತ ಪೋಲಿಸರ ಆತ್ಮಗಳಿಗೆ ಶಾಂತಿ ದೊರೆಯಲಿ.

|| ಇತಿ ಶಮ್ ||

No comments: