Wednesday, December 15, 2004

ಮೊದಲನೆ - ಎರಡನೆ - ಈ ತಾರತಮ್ಯವೇಕೆ ?

ಮೊನ್ನೆ ಹೀಗೇ ಬ್ರೌಸಿಸುತ್ತಿದ್ದಾಗ ಮದುರೆಯ ದೇವಾಲಯವನ್ನು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿ ಪರಿಗಣಿಸುವರೆಂಬಂತೆ ಮತಗಳನ್ನು ಅಪೇಕ್ಷಿಸಿದ್ದರು. ಅದನ್ನು ನೋಡಿ ಹಲವು ಭಾರತೀಯಮೂಲದವರು ಹಿಗ್ಗಿದ್ದರು. ನನಗೆ ಸ್ವಲ್ಪ ಅಸಮಾಧಾನವೇ ಆಯಿತು.

ಪ್ರಪಂಚ ಅಗಾಧ ! ಇದರಲ್ಲಿರುವ ಜನಗಳು ಅಸಂಖ್ಯರೆಂದೇ ಹೇಳಬಹುದು. ಸೃಷ್ಟಿಯ ಅದ್ಭುತಗಳೂ ಅಪಾರ. ಅರಿಜೋನದ grand canyon ಇಂದ ಹಿಡಿದು ನಮ್ಮ ಹಿಮಾಲಯಪರ್ವತಗಳ ವರೆವಿಗೂ ಅದ್ಭುತಗಳೇ! ಜೊತೆಗೆ ಮಾನವಕೃತ ಕಟ್ಟಡಗಳೂ ಅದ್ಭುತಗಳೇ ! ಈಜಿಪ್ಟಿನ ಪಿರಮಿಡ್ ಗಳಿಂದ ಹಿಡಿದು ನಮ್ಮ ತಾಜಮಹಲಿನವರೆವಿಗೂ ಅದ್ಭುತಗಳೇ ! ಇಷ್ಟೊಂದು ಅದ್ಭುತಗಳಿರುವಾಗ ಏಳಕ್ಕೆ ಏಕೆ ಸೀಮಿತಗೊಳಿಸಬೇಕು ಎಂಬುದೇ ನನ್ನ ಪ್ರಶ್ನೆ. ಈ ಎಳರ ಮಹತ್ವವಾದರೂ ಏನು ? ಟಾಪ್ ಟೆನ್ ಅನ್ನುವ ಹಾಗೆ ಹತ್ತೇಕಿಲ್ಲ ? ಅಥವಾ ನೂರೇಕಿಲ್ಲ ?

ಈ ಸಂಖ್ಯೆ ಹಾಗಿರಲಿ. ಪ್ರತಿಯೊಂದೂ ಶ್ರೇಷ್ಠತರ ಶ್ರೇಷ್ಠತಮವೆಂದೇ ನೋಡುವೆವಲ್ಲಾ.. ಈ ನಡೆವಳಿಕೆ ಏಕೆ ? ಶಾಲೆಯಲ್ಲಿ - ಸದ್ಯ ಈಗ ಅದನ್ನು ತೆಗೆದು ಹಾಕಿದ್ದಾರೆ - ಮಕ್ಕಳಿಗೆ Rank ಕೊಟ್ಟು ದುಶ್ಚಟ ಬೆಳೆಸಿದ್ದರು. ಮೊದಲನೆ rank ಪಡೆದವನು ಉತ್ತಮ. ಅವನಿಗಿಂತ ಕೆಳಗಿನ ಮಟ್ಟದಲ್ಲಿ ಎರಡೆನೆಯವನು. ಹೀಗೆಲ್ಲಾ ಸಾಗುತ್ತದೆ. ಮೊದಲನೆಯವನಿಗೂ ಎರಡನೆಯವನಿಗೂ ಅರ್ಧ ಅಂಕದ ವ್ಯತ್ಯಾಸವಿರಬಹುದು. ಆದರೆ ಮೊದಲಿಗ ಮೊದಲಿಗನೇ ಎಂದು ಹೇಳುವ ಜನ ನಾವು. ಇದರಿಂದ ಎರಡನೆಯವನಾಗಿ ಬಂದ ಮಗುವಿಗೆ ಏನಾಗಬಹುದು ? ಅಥವಾ ಹತ್ತರಲ್ಲಿ ಒಂದು Rankಅನ್ನೂ ಪಡೆಯದ ಮಗುವಿಗೆ ಏನನ್ನಿಸಬಹುದು ?

ಒಂದೊಂದೂ ವಸ್ತುವೂ ವಿಶಿಷ್ಟ. ಅದರ ವೈಶಿಷ್ಟ್ಯಕ್ಕೆ ಅದೇ ಸಾಟಿ. Grand Canyonಗೆ ಅದರದೇ ಗಾಂಭೀರ್ಯ. ಹಿಮಾಲಯಕ್ಕೆ ಅದರದೇ ಸೌಂದರ್ಯ. ಮದುರೆಯ ದೇವಾಲಯವೂ ಬೃಹತ್ತಾಗಿದೆ ಸುಂದರವಾಗಿದೆ - ಈಜಿಪ್ಟಿನ ಪಿರಮಿಡ್ ಗೆ ಸಹ ಅದರದೇ ಸೌಂದರ್ಯವಿದೆ. ಎಲ್ಲ ಬೇರೆ ಬೇರೆ ವಸ್ತುಗಳಿರುವಾಗ ಒಂದು ಇದಕ್ಕಿಂತ ಉತ್ತಮವೆಂದು ಹೇಗೆ ಹೇಳಲು ಸಾಧ್ಯ. ಹೋದರೆ ಹೋಗಲಿ - ಒಂದೇ ರೀತಿಯದಾಗಿದ್ದರೆ ಮಾಡಬಹುದೋ ಏನೋ ! ಪರೀಕ್ಷಯಲ್ಲಿ ಹೆಚ್ಹಿನ ಅಂಕ ಪಡೆದವನು ಪರೀಕ್ಷೆಯಲ್ಲಿ ಕಡಮೆ ಅಂಕ ಗಳಿಸುವವನಿಗಿಂತ ಮೇಲಿನ ಸ್ಥಾನದಲ್ಲಿರುತ್ತಾನೆ. ಎರಡು ಮೂಸಂಬಿಯನ್ನೋ ಎರಡು ಸೇಬನ್ನೋ ಹೋಲಿಸಬಹುದು - ಒಂದು ಇನ್ನೊಂದಕ್ಕಿಂತ ಸಿಹಿಯಾಗಿದೆಯೆಂದು. ಆದರೆ ಸೀಬೆಯನ್ನೂ ಸೇಬನ್ನೂ ಮೂಸಂಬಿಯನ್ನೂ ಒಟ್ಟಿಗೆ ಹೋಲಿಸಿ ಇದು ಮೊದಲನೆಯದು, ಇದು ಎರಡನೆಯದು ಎಂದು ಹೇಳಲು ಬಹಳ ಕಷ್ಟ. ಹಣ್ಣುಗಳಲ್ಲಿ ಈ ರೀತಿಯಾದರೆ - ಸೃಷ್ಟಿಯ ಅದ್ಭುತಗಳ ಮಧ್ಯೆ ಹೇಗೆ ತಾರತಮ್ಯ ಮಾಡುವುದು ? ಇದು ಹಾಸ್ಯಾಸ್ಪದವಲ್ಲವೇ ?

ಹೀಗೆ ದ್ವೈತಿಗಳಲ್ಲಿರುವ ತಾರತಮ್ಯಭಾವ ಮನಸ್ಸಿಗೆ ಬರುತ್ತದೆ. ಹರಿ ಸರ್ವೋತ್ತಮನಂತೆ. ವಾಯು ಜೀವೋತ್ತಮನಂತೆ. ಬೇರೆಯವರಲ್ಲಿ ಉಚ್ಚನೀಚಭೇದವಿದೆಯಂತೆ. ಭೇದವಿದೆ ಎಂದು ತಿಳಿದರೂ ಅವುಗಳನ್ನು ಅಳೆದು ಸ್ಥಾನಕೊಡಬೇಕಾದರೆ ಅವುಗಳಲ್ಲಿ ಸಮಾನವಾಗಿರುವುದು ಏನಾದರೂ ಇರಬೇಕು. ಪ್ರಾಯಶಃ ಉಪನಿಷತ್ತಿನ ಆನಂದದ ತಾರತಮ್ಯವನ್ನು ಮಾಧ್ವರು ಪ್ರಪಂಚಕ್ಕೇ ಎಳೆದಿದ್ದಾರೆ. ಆದರೆ ಈ ಭಾವ ನಿತ್ಯಜೀವನದಲ್ಲಿ ತಂದರೆ ಬಹಳ ಕಷ್ಟ. "ನೀಚ"ನೆಂದು ಪರಿಗಣಿಸಿದ ಒಬ್ಬನನ್ನು ನೋಡುವ ರೀತಿಯೇ ಬೇರೆ. ಜೊತೆಗೆ ಇವ ನೀಚ ಅವ ಉತ್ತಮನೆಂದು ತೀರ್ಮಾನಿಸುವವರು ಯಾರು ? ಮಾಧ್ವರ ತಾರತಮ್ಯಕ್ಕೆ ಶ್ರುತಿಯ ಆಧಾರವಿದೆ. ಆದರೆ ಮನುಷ್ಯರಲ್ಲಿನದಕ್ಕೆ ? ತೀರ್ಮಾನ ಕೇವಲ ಭಗವಂತನಿಂದ ಮಾತ್ರ ಸಾಧ್ಯ. ಬೇರೆಯವರು ಹೇಗೆ ಇನ್ನೊಬರ ಮನಸ್ಸನ್ನು ಹೊಕ್ಕಬಲ್ಲರು ? ಜೊತೆಗೆ 'ಒಳ್ಳೆಯತನ' ದಂಥದ್ದನ್ನು ಅಳೆಯುವುದಾದರೂ ಹೇಗೆ ? ಒಬ್ಬ ನಿಜವಾಗಿಯೂ ಒಳ್ಳೆಯವನಾಗಿದ್ದರೆ ಬೇರೆಯವರೆಲ್ಲರೂ ಒಳ್ಳೆಯವರಾಗಿಯೇ ಕಾಣುವರು ಎಂಬ ಸುಭಾಷಿತವೇ ಇದೆ. ಹೀಗೆ ಒಳ್ಳೆಯವರು ಕೆಟ್ಟವರು ಎಂಬುದೆಲ್ಲಾ ವ್ಯಕ್ತ್ಯಾಧಾರಿತ.

ಇದರ ಜೊತೆಗೆ ಸ್ಥಾನಗಳನ್ನು ಕೊಟ್ಟರೂ ನಿರ್ಜೀವ ವಸ್ತುಗಳಾದ ಕಟ್ಟಡಗಳಿಗೆ ಏನು ತಾನೇ ಆಗುವುದು ? ನಾಯಿ ಬೊಗಳಿದರೆ ದೇವಲೋಕ ಹಾಳೆ ಅನ್ನುವ ಹಾಗೆ ನಾವು ಈ ತಾರಪಮ್ಯದ ಅಬ್ಬರ ಮಾಡಿದರೂ ಅದನ್ನು ಕೇಳಲು ಅದು ಜೀವಂತವಾಗಿದ್ದರೆ ತಾನೆ ? ಏನೋ ಮನುಷ್ಯನ ವಿಚಿತ್ರ ಮನೋರಂಜನೆಗಾಗಿ ಇವೆಲ್ಲ! ನಾನು ಇದು ಕೆಟ್ಟದ್ದು ಎಂದು ಹೇಳುತ್ತಿಲ್ಲ. ನೋಡಿ ಆಶ್ಚರ್ಯ ಪಡುತ್ತಿದ್ದೇನೆ ಆಷ್ಟೆ.

No comments: