Wednesday, December 08, 2004

ಬೆಂಗಳೂರಿನ ತೊಂದರೆ ಮತ್ತು ಬೇರೆ ಮಾತುಗಳು

Dharam, Gowda can�t stand each other so the city is no one�s baby - Newindpress.com

ಇದನ್ನು ಓದಿದ ಮೇಲೆ ನನಗೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಬೆಂಗಳೂರಿನಲ್ಲಿ ಬಹುರಾಷ್ಟ್ಟಿಯ ಸಂಸ್ಥೆಗಳು ಹೆಚ್ಚು ಹಣವನ್ನು ನಗರದಲ್ಲಿ ಹಾಕುತಿದ್ದಾಗ ಈ ದರಿದ್ರ ಬುದ್ಧಿಯ ರಾಜಕಾರಣಿಗಳ ಆಟದಲ್ಲಿ ನನ್ನ ಪ್ರಿಯವಾದ ನಗರ ಬಳಲಿದೆ.

ಈ ಜನತಾದಳಕ್ಕೆ ತಕ್ಕ ಶಾಸ್ತಿಯಾಗಿದೆ. ಇದರ ಮುಖಂಡನಿಗೆ ಮುಖಮುಚ್ಚಿಕೊಳ್ಳುವಂಥ ಅವಮಾನ ಬೆಂಗಳೂರಿನಲ್ಲಿ ನಡೆದಿದೆ. ಇದನ್ನು ಓದಿ ನನಗೆ ಈ ಕಷ್ಟದಲ್ಲೂ ಸ್ವಲ್ಪ ಸಂತೋಷವಾಗಿದೆ - ಇಂಥ ಅಪ್ರಯೋಜಕರಿಗೆ ತಕ್ಕ ಶಾಸ್ತಿ ನಮ್ಮ ಬೆಂಗಳೂರು ಮಾಡಿದೆ ಎಂದು.

ಒಂದು ವಿಷಯ ತಿಳಿಯುವುದಿಲ್ಲ. ನಿಮ್ಮ ಹಳೇ ಮೈಸೂರು ಉದ್ಧಾರವಾಗಬೇಕಾದರೆ ಬೆಂಗಳೂರು ಸೊರಗಬೇಕೇ ? ಈ ದರಿದ್ರ communist ಬುದ್ಧಿಯಿಂದ ದೇಶ ಖಂಡಿತ ಉದ್ಧಾರವಾಗೋಲ್ಲ. ಒಬ್ಬ ಎತ್ತರವಿದ್ದು ಒಬ್ಬ ಕುಳ್ಳಗಿದ್ದರೆ - ಇವರಿಬ್ಬರನ್ನೂ ಸಮಾನ ಮಾಡುವುದಕ್ಕೋಸ್ಕರ ಎತ್ತರದವನ ತಲೆ ಕಡಿದುಬಿಡಬಹುದೇ ? ಇದೇ ಬುದ್ಧಿ ತೋರಿದ್ದಾರೆ ಈ ರಾಜಕಾರಣಿಗಳು.

ಈ ಮಧ್ಯೆ ಭಯಂಕರ ಸ್ವಾರ್ಥ. ತಮ್ಮ ಮನೆಗೆ - ತಮ್ಮ ಮನೆಯವರಿಗೆ ಲಾಭವಾದರೆ ಸಾಕು. ದೇಶವಿಡೀ ಹಸಿದುಕೊಂಡಿದ್ದರೂ ಸಾಕು.

ಈ ಪಾಟಿ ಸಂಸ್ಥೆಗಳು ಬೆಂಗಳೂರಿಗೆ ಬಂದದ್ದು ಒಂದು ರೀತಿ ಕರುನಾಡಿಗೆ ಒಳ್ಳೆಯದಿಲ್ಲದೇ ಹೋದರು ಆರ್ಥಿಕ ರೀತಿಯಲ್ಲಿ ಒಳ್ಳೆಯದೇ ಆಗಿದೆ. ಇದರಿಂದ ಮೊದಲ್ಗೊಂಡು ಕರ್ಣಾಟಕದ ಇತರ ನಗರಗಳಲ್ಲೂ ಮಾಹಿತಿ-ತಂತ್ರಜ್ಞಾನ, ಉದ್ಯಮ ಸ್ಥಾಪನೆ ನಡೆಯುತ್ತದೆ. ಆದರೆ ಇದಕ್ಕೆ ಬೆಂಗಳೂರಿನ ಮೂಲಕವೇ ದಾರಿ. ಬೆಂಗಳೂರು ಚೆನ್ನಿದ್ದರೆ ಕರ್ಣಾಟಕವು ಉದ್ಧಾರವಾಗಬಹುದು. ಮನೆಯ ಬಾಗಿಲು ಚೆನ್ನಿದ್ದರೆ ಬೇರೆಯವರು ಮನೆಯೊಳಗೆ ಬರಬಹುದು. ಬಾಗಿಲು ಚೆನ್ನಿಲ್ಲದಿದ್ದರೆ ಭಾಗ್ಯ ನಮ್ಮ ಮನೆಗೆ ಬರುವುದಿಲ್ಲ. ಈ ಸತ್ಯವನ್ನು ತಿಳಿದರೆ ಒಳ್ಳೆಯದು.

ಅಂದ ಹಾಗೆ - ನಾನು ಕರ್ನಾಟಕವೆಂದೇಕೆ ಬರೆಯುವುದಿಲ್ಲ ? ಕರ್ಣಾಟಕವೆಂದೇ ಏಕೆ ಬರೆಯುತ್ತೇನೆ ಎಂದು ಕೇಳಿದರೆ - ನನ್ನ ಉತ್ತರ - ಕರ್ಣಾಟಕ ಸರಿ, ಕರ್ನಾಟಕ - ಬಹಳ ಉಪಯೋಗಿಸಿದರೂ ಸಹ - ತಪ್ಪು ಎಂದು. ಇದೇಕೆ ಎಂದು ಕೇಳಿದರೆ - ಪಾಣಿನಿಯ ಅಷ್ಟಾಧ್ಯಾಯಿಯ ಸೂತ್ರ - "ರಷಾಭ್ಯಾಂ ನೋಣಃ ಸಮಾನಪದೇ" - ಇದನ್ನು ನೋಡಬಹುದಾಗಿದೆ. ಈ ಸೂತ್ರದ ಅರ್ಥ - "ಒಂದು ಸಂಪೂರ್ಣ ಪದದಲ್ಲಿ ರ, ಅಥವಾ ಷ ಬಂದರೆ - ನಂತರ ಬಂದ 'ನ' ಅಕ್ಷರವು 'ಣ' ಅಕ್ಷರವಾಗಿ ಪರಿವರ್ತನೆ ಹೊಂದುತ್ತದೆ ಎಂದು. ಉದಾ : ಉಷ್ಣ - ಈಗ ಉಷ್ನ (ಇಲ್ಲಿ 'ನ'ಕಾರದ ಒತ್ತು ಗಮನಿಸಿ) ಎಂದು ಹೇಳುವುದು ಅಷ್ಟು ಸ್ವಾಭಾವಿಕವಾಗದು. ಉಷ್ಣ (ಣ ಕಾರವೇ ಸಾಧು). ಇದರ ಅರ್ಥವೇನೆಂದರೆ ನಮ್ಮ ಸರ್ಕಾರ ದೊಡ್ಡ ತಪ್ಪುಗಳನ್ನು ಪ್ರತಿದಿನವೂ ತಪ್ಪು ಮುದ್ರಣ ಮಾಡಿಸುವ ಮೂಲಕ ಮಾಡುತ್ತಿದೆ ಎಂದು.

ಇದರ ಜೊತೆಗೆ - ಕಳೆದ ವಾರ ನಾನು 'ಆಪ್ತಮಿತ್ರ' ಸಿನಿಮಾ ನೋಡಿದೆ. ನೂರು ದಿನಗಳು ಓಡಿದ ನಂತರ ನೋಡಿದ ಈ ಚಿತ್ರವನ್ನು ಒಂದು ಬಾರಿ ನೋಡಬಹುದು. ಒಂದೆರಡು ಅನಾವಶ್ಯಕ ಹೊಡೆದಾಟ - ಹಾಡು ಇರದೇ ಹೋಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಜೊತೆಗೆ ತೆಲುಗಿನ ಹಾಡನ್ನು ಕನ್ನಡದ ಹಾಡನ್ನಾಗಿ ಮಾಡಬಹುದಿತ್ತು. ಗಂಗಾ ತೆಲುಗನ್ನು ಹೇಗೆ ಮಾತಾಡಲು ಶಕ್ತಳಾಗುತ್ತಾಳೆ ಎಂದು ಇಲ್ಲಿ ಹೇಳಿಯೇ ಇಲ್ಲ. ಆದರೆ ಸೌಂದರ್ಯಳ ಅಪೂರ್ವಾಭಿನಯಕ್ಕೋಸ್ಕರವಾಗಿಯಾದರೂ ಈ ಚಿತ್ರವನ್ನು ನೋಡಲೇ ಬೇಕು. ಅನ್ಯಾಯವಾಗಿ ಒಳ್ಳೆಯ ಕಲಾವಿದೆಯನ್ನು ನಾವು ಕಳೆದುಕೊಂಡಿದ್ದೇವೆ.

ಈಗ ನಾನು ಇಂಗ್ಲೀಷಿನ 'The Story of Philosophy' ಎಂಬ ಪುಸ್ತಕವನ್ನು ಓದುತ್ತಿದ್ದೇನೆ. ಬಹಳ ಒಳ್ಳೆಯ ಪುಸ್ತಕವಾದರೂ ಈ ಫಿಲಾಸಫಿ ಓದುವುದು ಕಷ್ಟವೇ! ಎರಡು ವಾರ - ಪ್ರತಿದಿನ ಒಂದು ಘಂಟೆಯ ಹಾಗೆ ಓದಿದರೂ ೨೮೦ ಪುಟಗಳನ್ನು ಮಾತ್ರ ಓದಲು ಸಾಧ್ಯವಾಗಿದೆ. ಅದೂ ಕಥೆಪುಸ್ತಕವಲ್ಲವಲ್ಲ! ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳುವಂಥ ಪುಸ್ತಕ. ಓದುತ್ತಾ ಕನ್ನಡ ಮರೆವ ಹಾಗೆ ಕಂಡಿತು. ಸ್ವಲ್ಪ ಬ್ಲಾಗಿಸಿಯಾದರೂ ಕನ್ನಡದಲ್ಲಿ ಬರಯಬಹುದು ಎಂದು ಬರೆದಿದ್ದೇನೆ.
|| ಶುಭಂ ಭೂಯಾತ್ ||

3 comments:

Anonymous said...

ಮಾನ್ಯರೆ

ನಿಮ್ಮ ಬಹುಭಾಷಾ ಬ್ಲಾಗ್ ನೋಡಿ ಸಂತೋಷವಾಯಿತು .

ಇಲ್ಲಿ ಈ ಕೆಳಕಂಡಂತೆ ನಿಮ್ಮ ಟಿಪ್ಪಣಿ ನೋಡಿದೆ.

ಕರ್ಣಾಟಕವೆಂದೇ ಏಕೆ ಬರೆಯುತ್ತೇನೆ ಎಂದು ಕೇಳಿದರೆ - ನನ್ನ ಉತ್ತರ - ಕರ್ಣಾಟಕ ಸರಿ, ಕರ್ನಾಟಕ - ಬಹಳ ಉಪಯೋಗಿಸಿದರೂ ಸಹ - ತಪ್ಪು ಎಂದು. ಇದೇಕೆ ಎಂದು ಕೇಳಿದರೆ - ಪಾಣಿನಿಯ ಅಷ್ಟಾಧ್ಯಾಯಿಯ ಸೂತ್ರ - "ರಷಾಭ್ಯಾಂ ನೋಣಃ ಸಮಾನಪದೇ" - ಇದನ್ನು ನೋಡಬಹುದಾಗಿದೆ. ಈ ಸೂತ್ರದ ಅರ್ಥ - "ಒಂದು ಸಂಪೂರ್ಣ ಪದದಲ್ಲಿ ರ, ಅಥವಾ ಷ ಬಂದರೆ - ನಂತರ ಬಂದ 'ನ' ಅಕ್ಷರವು 'ಣ' ಅಕ್ಷರವಾಗಿ ಪರಿವರ್ತನೆ ಹೊಂದುತ್ತದೆ ಎಂದು. ಉದಾ : ಉಷ್ಣ - ಈಗ ಉಷ್ನ (ಇಲ್ಲಿ 'ನ'ಕಾರದ ಒತ್ತು ಗಮನಿಸಿ) ಎಂದು ಹೇಳುವುದು ಅಷ್ಟು ಸ್ವಾಭಾವಿಕವಾಗದು. ಉಷ್ಣ (ಣ ಕಾರವೇ ಸಾಧು). ಇದರ ಅರ್ಥವೇನೆಂದರೆ ನಮ್ಮ ಸರ್ಕಾರ ದೊಡ್ಡ ತಪ್ಪುಗಳನ್ನು ಪ್ರತಿದಿನವೂ ತಪ್ಪು ಮುದ್ರಣ ಮಾಡಿಸುವ ಮೂಲಕ ಮಾಡುತ್ತಿದೆ ಎಂದು.

ಈ ಕುರಿತು ನನಗೆ ಗೊತ್ತಿರುವ ಮಟ್ಟಿಗೆ ನಿಮಗೆ ಹೇಳಬಯಸುವದೆಂದರೆ . ಕರ್ನಾಟಕ / ಕರ್ಣಾಟಕ - ಯಾವುದು ಸರಿ ಎಂಬ ಬಗ್ಗೆ ಕರ್ನಾಟಕ ಏಕೀಕರಣ ಮತ್ತು ನಾಮಕರಣ ಸಂದರ್ಭದಲ್ಲಿ ಚರ್ಚೆ ಬಹಳ ಹಿಂದೆಯೇ ಆಗಿ ಹೋಗಿದೆ . ವಿವರ ನನಗೆ ಗೊತ್ತಿಲ್ಲ / ಸಿಕ್ಕಿಲ್ಲ . ಅಸ್ಪಷ್ಟ ಉತ್ತರವೊಂದನ್ನು ನನಗೆ ಒಬ್ಬರು ಕೊಟ್ಟಿದ್ದಾರೆ . ಏನೇ ಇರಲಿ ಈಗ ಕರ್ನಾಟಕ ಎಂದೇ ಎಲ್ಲರೂ ಒಪ್ಪಿದ್ದಾರೆ. ಆ ಪ್ರಕಾರ ಉಪಯೋಗಿಸುತ್ತಲೂ ಇದ್ದಾರೆ .
ಹೀಗಾಗಿ "ಇದರ ಅರ್ಥವೇನೆಂದರೆ ನಮ್ಮ ಸರ್ಕಾರ ದೊಡ್ಡ ತಪ್ಪುಗಳನ್ನು ಪ್ರತಿದಿನವೂ ತಪ್ಪು ಮುದ್ರಣ ಮಾಡಿಸುವ ಮೂಲಕ ಮಾಡುತ್ತಿದೆ " ಎನ್ನುವದು ಬಹುಶ: ತಪ್ಪಾಗುತ್ತದೆ.

ನಿಮಗೆ ಗೊತ್ತೆ ? ಅಂತರ್ರಾಷ್ಟ್ರೀಯ / ಅಂತಾರಾಷ್ಟ್ರೀಯ ಯವುದು ಸರಿ ?

ಸಂಸ್ಕೃತದಲ್ಲಿ ಅಂತರ್ರಾಷ್ಟ್ರೀಯ . ಕನ್ನಡದಲ್ಲಿ ಅಂತಾರಾಷ್ಟ್ರೀಯ.

ನಿಮ್ಮ

ಶ್ರೀಕಾಂತ ಮಿಶ್ರಿಕೋಟಿ.

nIlagrIva said...

ಕರ್ಣಾಟಕ/ಕರ್ನಾಟಕ ಎಂಬ ಚರ್ಚೆ ಹಳೆಯದೇ ನಿಜ. ಆದರೆ ನಮ್ಮದು ಪ್ರಜಾತಂತ್ರಸರ್ಕಾರವಾಗಿರುವುದರಿಂದ ಜನ ಹೇಳಿದ್ದೇ ಸರಿ. ವ್ಯಾಕರಣ ದೃಷ್ಟಿ ಕೇವಲ ಒಂದು guideline ಅಷ್ಟೆ. ನೀವು ಡಿ.ವಿ.ಜಿ ಯವರ ಸಾಹಿತ್ಯವನ್ನೋದಿದರೆ ಅವರೂ ಸಹ ಕರ್ಣಾಟಕ ಎಂಬ ಪ್ರಯೋಗವನ್ನೇ ಮಾಡುತ್ತಾರೆ. ಆದರೆ ಹೇಳಿದೆನಲ್ಲಾ - ನಮ್ಮದು ಡೆಮಾಕ್ರಸಿ.

ಸಂಸ್ಕೃತದಲ್ಲಿ ಅಂತರ್ರಾಷ್ಟ್ರೀಯ ತಪ್ಪು ಪ್ರಯೋಗ - ಅಂತಾರಾಷ್ಟ್ರಿಯ (ಇಲ್ಲಿ ಷ್ಟ್ರಿಯ ಎಂಬಲ್ಲಿ ಹ್ರಸ್ವ್ 'ಇ'ಕಾರ ಗಮನಿಸಿ) ಎಂಬುದೇ ಸರಿಯಾದದ್ದು. ಇದಕ್ಕೇ ಕಾರಣ ಅಲ್ಲಿನ ವಿಸರ್ಗಸಂಧಿ ನಿಯಮ. ಪುನಃ + ರಚನೆ ಪುನರ್ರಚನೆಯಾಗುವುದಿಲ್ಲ ಪುನಾರಚನೆಯಾಗುತ್ತದೆ (ರ ಕಾರಕ್ಕೆ ಬೇರೆಯ ನಿಯಮ). ಹಾಗೆ ಅಂತಃ ಮತ್ತು ರಾಷ್ಟ್ರಿಯ ಅಂತಾರಾಷ್ಟ್ರಿಯವಾಗುತ್ತದೆ. ರಾಷ್ಟ್ರಿಯ ರಾಷ್ಟ್ರಕ್ಕೆ ಸಂಬಂಧ ಪಟ್ಟದ್ದು ಎಂದಾಗುತ್ತದೆ. ಈಗ ನಾಗರೀಕ ತಪ್ಪು ನಾಗರಿಕ ಸರಿ.

ಕನ್ನಡದಲ್ಲೂ ಅದೇ ಇರಬೇಕು. ಏಕೆಂದರೆ "ಅಂತಃ" ಮತ್ತು "ರಾಷ್ಟ್ರಿಯ" ಇವೆರಡೂ ಸಂಸ್ಕೃತಪದಗಳೇ. ಸಂಸ್ಕೃತಪದವನ್ನುಪಯೋಗಿಸುವಾಗ ಅದರದೇ ವ್ಯಾಕರಣವನ್ನು ಉಪಯೋಗಿಸುವುದು ಸರಿ.

ಈಗ್ಗೆ ಹತ್ತು ವರ್ಷಗಳ ಹಿಂದೆ "ಅಂತರರಾಷ್ಟ್ರೀಯ" ಎಂದು ಕನ್ನಡದಲ್ಲಿ ಬಹುಮಂದಿ ಉಪಯೋಗಿಸುತ್ತಿದ್ದರು. ಆದರೆ ಈಗ ಅಂತಾರಾಷ್ಟ್ರೀಯ ಒಪ್ಪಿಗೆಯಾಗಿದೆ. ಇನ್ನು ಸ್ವಲ್ಪದಿನಗಳಾದ ಮೇಲೆ ಬೇರೇನಾಗುತ್ತದೆಯೋ?

ಅದಿರಲ. ಬರಹ/ಬರೆಹ ಇವೆರಡರಲ್ಲಿ ಯಾವುದು ಸರಿ ಎಂದು ಹೇಳಬಲ್ಲಿರಾ? ಮೊದಲನೆಯದು ರೂಢಿಯಿಂದ ಸರಿ. ಎರಡನೆಯದು ವ್ಯಾಕರಣಬಲದಿಂದ ಸರಿ.

ಹಾಗೆ ನೋಡಿದಾಗ ನಮ್ಮ ಸಮೂಹಮಾಧ್ಯಮಗಳು ಭಾಷೆಯ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡುತ್ತವೆ. ಉದಾಹರಣೆಗೆ - ಅಂತಾರಾಷ್ಟ್ರಿಯ ಎನ್ನುವುದು ಸರಿಯಾದರೂ ಅಂತರರಾಷ್ಟ್ರಿಯ/ಅಂತಾರಾಷ್ಟ್ರೀಯಗಳೇ ಪತ್ರಿಕೆ ಮುಂತಾದ ಮಾಧ್ಯಮಗಳು ಮಾಡಿಸಿರುವ ರೂಢಿಯಿಂದ ಸರಿಯೆಂದು ಕಾಣುತ್ತವೆ.

ಇದರ ಬಗ್ಗೆ ನಿಮಗೀಗ ಏನನಿಸುತ್ತದೆ?

-ನೀಲಗ್ರೀವ