Tuesday, October 05, 2004

It's time we set things right, says Girish Kasaravalli

It's time we set things right, says Girish Kasaravalli
ಹಿಂದಿನ ನನ್ನ ಬ್ಲಾಗಿನಲ್ಲಿ ಕನ್ನಡ ಚಿತ್ರರಂಗ ನಡೆಸುತ್ತಿರುವ ಮುಷ್ಕರ ತಪ್ಪು ಎಂದು ಭಾವಿಸಿದ್ದೆ. ಆದರೆ ಒಂದೆರಡು ವಾರಗಳ ಹಿಂದೆ ಚಲನಚಿತ್ರರಂಗದಲ್ಲಿರುವ ಸಂಭಾಷಣಾಕಾರರೊಡನೆ ಮಾತು ನಡೆಯಿತು. ಅವರು ಹೇಳಿದ್ದು ನನ್ನ ಕಣ್ಣು ತೆರೆಸಿತು. ಬೇರೆ ಭಾಷೆಗಳ ಚಿತ್ರಗಳು ಪ್ರಥಮತಃ ಒಳ್ಳೆಯವೇನೂ ಇಲ್ಲ. ಅವುಗಳ ಮಟ್ಟ ನಮ್ಮ ಚಿತ್ರಗಳ ಮಟ್ಟಕ್ಕಿಂತ ಹೆಚ್ಚಿನದೇನಿಲ್ಲ. ಇನ್ನೊಂದು ದೊಡ್ಡ ಕಾರಣವೆಂದರೆ - ಚಲಚ್ಚಿತ್ರ ಪ್ರದರ್ಶಕರು ಮಾಡುವ ಅನ್ಯಾಯ. ಬೇರೆ ಭಾಷೆಗಳ ಚಿತ್ರಗಳು ಬೆಂಗಳೂರಿನಲ್ಲಿ ಹೆಚ್ಚು ದುಡ್ಡು ಮಾಡುತ್ತವೆ. ಏಕೆಂದರೆ ಕನ್ನಡಿಗರೂ ಬೇರೆಭಾಷೆಯ ಚಿತ್ರಗಳನ್ನು ನೋಡುವುದಕ್ಕೆ ನುಗ್ಗುತ್ತಾರೆ. ಜೊತೆಗೆ ಕನ್ನಡ ಚಿತ್ರಗಳನ್ನು ತೋರಿಸುವುದಿಲ್ಲ. ಏಕೆಂದರೆ - ಹಿಂದಿ,ತಮಿಳು, ತೆಲುಗು, ಮಲಯಾಳ, ಇಂಗ್ಲೀಷ್ ಭಾಷೆಗಳ ತಲಾ ೪ ಚಿತ್ರ ೩ ಚಿತ್ರಮಂದಿರಗಳಲ್ಲಿ ತೋರಿಸಬೇಕೆಂದರೆ ೧೨-೧೪ ಚಿತ್ರಮಂದಿರಗಳು (ವಸ್ತುತಃ ಇನ್ನೂ ಹೆಚ್ಚು) ಕನ್ನಡಕ್ಕೆ ಸಿಗುವುದಿಲ್ಲ. ಕನ್ನಡದ ನಿರ್ಮಾಪಕರು ಬಡವರೇ ಏಕೆಂದರೆ ಕರ್ಣಾಟಕದಲ್ಲಿ ಮಾತ್ರ ಕನ್ನಡ ಚಿತ್ರಗಳನ್ನು ನೋಡುವುದು. ಬೇರೆ ಭಾಷೆಗಳ ಚಿತ್ರಗಳು ಆಯಾ ಭಾಷೆಯ ರಾಜ್ಯದಲ್ಲಲ್ಲದೇ ಕರ್ಣಾಟಕದಲ್ಲಿಯೂ ದುಡ್ಡು ಮಾಡುತ್ತವೆ. ದುಡ್ದಿನ ಶಕ್ತಿ ಇರುವ ನಿರ್ಮಾಪಕರು ವಿತರಣೆದಾರರಿಗೆ ಒಳ್ಳೆಯ ಹಣದ ಆಸೆ ತೋರಿಸಿ ಕನ್ನಡದಿಂದ ಚಿತ್ರಮಂದಿರಗಳನ್ನು ಕಸಿದುಕೊಳ್ಳುತ್ತಾರೆ. ಇದು ಶುದ್ಧ ಮೋಸ. ಇದನ್ನೇ ವಿರೋಧಿಸುತ್ತಿರುವುದು. ಈ ಮೇಲಿನ ಲೇಖನದಲ್ಲಿ ಇದೇ ವಿಷಯವನ್ನು ಒಳ್ಳೆಯ ನಿರ್ದೇಶಕರಾದ ಕಾಸರವಳ್ಳಿಯವರೂ ಹೇಳಿದ್ದಾರೆ. ಸ್ವಲ್ಪ ಯೋಚಿಸಿದ ಮೇಲೆ ಇವರೇ ಸರಿ ಅನಿಸಿತು.

ನಮ್ಮ ಚಿತ್ರಗಳ ಗುಣಮಟ್ಟ ಹೆಚ್ಚಿಸಬೇಕು. ಆದರೆ ಬೇರೆ ಭಾಷೆಯ ಚಿತ್ರಗಳ ಮಟ್ಟವೇನೂ ಹೆಚ್ಚಿಲ್ಲ. ನಮ್ಮಲ್ಲಿ ನಮ್ಮ ಚಿತ್ರಗಳನ್ನು ಪ್ರೋತ್ಸಾಹಿಸದೆ ದೆಹಲಿಯಲ್ಲೋ ದುಬೈನಲ್ಲೋ ಮಾಡಬೇಕೇ ?

ಕನ್ನಡ ಚಿತ್ರ ರಸಿಕರೇ ಎದ್ದೇಳಿ! ಈ ಗೊಂದಲ ಬಗೆಹರಿದ ಮೇಲೂ ಕನ್ನಡ ಚಿತ್ರಗಳಿಗೇ ನಿಮ್ಮ ಆದ್ಯತೆ ಇರಲಿ. ಈ ಸಮಸ್ಯೆ ಕಳೆಯುವ ವರೆಗೂ ಪರಭಾಷಾ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿ. ಅವರಿಗೆ ದುಡ್ಡು ಮಾಡಿ ಕೊಟ್ಟದ್ದು ಸಾಕು. ನಮ್ಮ ಕಲಾವಿದರು ಇನ್ನಾದರೂ ಹಣದ ಮುಖ ನೋಡುವಂತಾಗಲಿ.

ಈ ವಾರದಲ್ಲಿ ನಾನು ಎರಡು ಕನ್ನಡ ಚಿತ್ರಗಳನ್ನು ನೋಡುತ್ತೇನೆ. ಒಂದು ಆಪ್ತಮಿತ್ರ. ಇನ್ನೊಂದು ಗೊತ್ತಿಲ್ಲ. ಆದರೆ ನನ್ನ ಜೇಬಿನಿಂದ ಕನ್ನಡಕ್ಕೆ ಸಹಾಯಮಾಡಬೇಕು. ಕೇವಲ ಮನದಿಂದಲ್ಲ. Put your wallet where your mouth is ಅನ್ನುತ್ತಾರಲ್ಲಾ ಹಾಗೆ. ನಾನು ಹಾಗೇ ಮಾಡುತ್ತೇನೆ. ಈ ಬ್ಲಾಗನ್ನು ಯಾರಾದರೂ ಕರ್ಣಾಟಕದಲ್ಲಿರುವವರು ನೋಡಿದರೆ ದಯವಿಟ್ಟು ತಮ್ಮ ಸಮೀಪದ ಚಿತ್ರಮಂದಿರದಲ್ಲಿ ಒಂದೆರಡು ಕನ್ನಡ ಚಿತ್ರ ನೋಡಿ ಪುಣ್ಯ ಕಟ್ಟಿಕೊಳ್ಳಿ.

|| ಎಲ್ಲರಿಗೂ ಒಳ್ಳೆಯ ಬುದ್ಧಿ ಬರಲಿ ||

No comments: