Monday, October 18, 2004

ಅಂಕಲ್ ಇನ್ನಿಲ್ಲ

ಹೋದ ಶನಿವಾರ ನನ್ನ ನೆಚ್ಚಿನ ಅಂಕಲ್ ದಿವಂಗತರಾದರು. ಹದಿನೈದು ದಿನಗಳಿಂದ ಕೋಮಾದಲ್ಲಿದ್ದ ಅವರು ಈ ಭೂಮಿಯನ್ನು ಬಿಟ್ಟು ಹೊರಟರು. ಅವರ ಬಗ್ಗೆ ನಾನಾ ಭಾವನೆಗಳು ಮನದಲ್ಲಿ ಮೂಡಿದವು. ಅವುಗಳನ್ನೆಲ್ಲ ಇಲ್ಲಿ ಬರೆಯಲು ಸಾಧ್ಯವಿಲ್ಲ. ಆದರೂ ಕೆಲವು ತೋಚಿದ್ದನ್ನು ಬರೆದು ಅವರಿಗೆ ನನ್ನ ಶ್ರದ್ಧಾಂಜಲಿಯನ್ನು ನೀಡುವ ಪ್ರಯತ್ನ ಮಾಡುತ್ತೇನೆ.

ನನಗೆ ಅಂಕಲ್ ಎಂದರೆ ಮನಸ್ಸಿಗೆ ಬರುವುದು ಅವರ ಹಸನ್ಮುಖ. ಎಂದೂ ಅವರ ಮುಖದಲ್ಲಿ ನಗುವು ಇರದೇ ಇರಲಿಲ್ಲ. ಮನಸ್ಸಿನಲ್ಲಿ ಏನೇ ಭಾವನೆ ಇದ್ದರೂ ಅದನ್ನು ತೋರಿಸುತ್ತಿರಲಿಲ್ಲ. ಬೇರೆಯವರ ಮನಸ್ಸನ್ನು ನನ್ನ ಕಥೆಯಿಂದ ಏಕೆ ಹಾಳುಮಾಡಬೇಕು ಅನ್ನುವುದು ಅವರ ಧೋರಣೆಯಾಗಿತ್ತು. ಇದು ಅವರ ಆಂತರಿಕ ತುಮುಲವನ್ನು ಅವರೊಳಗೇ ಇಟ್ಟಿತ್ತೋ ಏನೋ ಎಂದೆನಿಸುತ್ತದೆ.

ಅವರು ಯಾವಾಗಲೂ ಒಳ್ಳೆಯ ಉಡುಪನ್ನು ಧರಿಸುತ್ತಿದ್ದರು. ಎಂದಿಗೂ ಅವರು full shirt ಧರಿಸದೆ ಹೊರಗೆ ಕಾಲಿಟ್ಟವರಲ್ಲ. ಚೊಕ್ಕಟವಾಗಿ ಮಾಡಿದ ಕ್ರಾಪು. ಬಳಿಗೆ ಹೋದರೆ ಲಘುವಾದ ಪರಿಮಳ - ಮೂಗಿಗೆ ಬಡಿಯುವಷ್ಟಲ್ಲ. ನಮ್ಮನ್ನು ನೋಡಿದರೆ ಇತರರು ಸಂತೋಷ ಪಡಬೇಕು ಎಂಬುದೇ ಅವರ ಆಸೆಯಿತ್ತು.

ಸಂಗೀತದಲ್ಲಿ ಅವರು ಅಷ್ಟು ಪರಿಣತರಾಗಿರದಿದ್ದರೂ ರಸಿಕರಾಗಿದ್ದರು. ಒಳ್ಳೆಯ ಕಛೇರಿಗಳನ್ನು ಎಂದೂ ತಪ್ಪಿಸುತ್ತಿರಲಿಲ್ಲ. ಎಲ್ಲ ಸಂಗೀತಗಾರರ (ಹಳೆಯ ಮತ್ತು ಹೊಸ) ಧ್ವನಿಸುರುಳಿಗಳನ್ನೂ ಮನೆಯಲ್ಲಿಟ್ಟಿದ್ದರು - ಬಹಳಷ್ಟು ಸಲ ಕೇಳುತ್ತಿದ್ದರೂ ಕೂಡ. ನಾನು ಅವರ ಕಚೇರಿ partner ಆಗಿದ್ದೆ ಕೆಲವು ದಿವಸ.

ಅವರ ದೈವಭಕ್ತಿಯೂ ಅಪಾರವಾದದ್ದು. ದೊಡ್ಡ ಹುದ್ದೆಯಲ್ಲಿದ್ದು ಕೆಲಸ ಹೆಚ್ಚಿದ್ದರೂ ಅವರು ಬೆಳಗಿನ ಸಂಧ್ಯೆ ಜಪಗಳನ್ನು ತಪ್ಪಿಸುತ್ತಿರಲಿಲ್ಲ. ವಾರಕ್ಕೊಮ್ಮೆಯಾದರೂ ದೇವಸ್ಥಾನಕ್ಕೆ ಹೋಗಿ ಅಲ್ಲಿ ತಮ್ಮ ಇಷ್ಟದೇವತೆಗಳಾದ ಗಣೇಶ ಮತ್ತು ವೇಂಕಟೇಶ್ವರರನ್ನು ಸಂದರ್ಶಿಸುತ್ತಿದ್ದರು. ದೇವಸ್ಥಾನದ ಸ್ಥಾಪಕರಲ್ಲಿ ಇವರು ಒಬ್ಬರಾಗಿದ್ದರು.

ಜನರ ಬಗ್ಗೆ ಪ್ರೀತಿ ಹೊಂದಿದ್ದರು. ಯಾರನ್ನೇ ಆಗಲಿ ತಾತ್ಸಾರ ಭಾವನೆಯಿಂದ ನೋಡುತ್ತಿರಲಿಲ್ಲ. ನಗುತ್ತಲೇ ಎಲ್ಲರನ್ನು ಮಾತಾಡಿಸುತ್ತಿದ್ದರು. ತಮ್ಮ ಸ್ವಂತ ಕುಟುಂಬದ ಜನರನ್ನು ಮಾತ್ರವಲ್ಲದೇ ತಮ್ಮ ಸಂಬಂಧಿಕರಲ್ಲೆರನ್ನೂ ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಬಹಳಷ್ಟು ಜನರಿಗೆ ಉಪಕಾರವನ್ನು ಸಹ ಮಾಡಿದರು.

ಇವೆಲ್ಲರ ಜೊತೆಗೆ ಅಂಕಲ್ ತೀಕ್ಷ್ಣಮತಿಗಳಾಗಿದ್ದರು. ಹೊಸ ವಿಷಯವನ್ನು ಸುಲಭವಾಗಿ ಗ್ರಹಿಸಿಬಿಡುತ್ತಿದ್ದರು. ಜೊತೆಗೆ ವೃತ್ತಿಯಿಂದ ಹಿರಿಯ ವಿಜ್ಞಾನಿಯೆಂದು ಹೇಳಿದರೆ ಸಾಕು. ಅವರ ಬುದ್ಧಿಯ ತೀಕ್ಷ್ಣತೆಯ ಬಗ್ಗೆ ಇನ್ನೇನೂ ಹೇಳ ಬೇಕಾಗುವುದಿಲ್ಲ.

ಇವರ ದೊಡ್ಡ ಗುಣವೆಂದರೆ ಜೀವನಪ್ರೀತಿ. ಸಿನಿಮಾ ನೋಡೋಣವಾಗಲಿ, ಹೊರಗೆ ಊಟ ಮಾಡುವುದಾಗಲಿ, ಬೇರೆಯವರೊಡನೆ ಮಾತಾಗಲಿ, ಬೇರೆಯವರ ಮೇಲೆ ಬೀರಿದ ಪ್ರಭಾವವಾಗಲಿ - ಎಲ್ಲದರಲ್ಲೂ ಇವರು ವಿಶಿಷ್ಟರಾಗಿದ್ದರು. ಒಟ್ಟಿನಲ್ಲಿ ಇವರು ಸಜ್ಜನರು, ಅತ್ಯುನ್ನತ ಮಟ್ಟದ ಮನುಷ್ಯರು ಎಂದು ಹೇಳಿದರೆ ಅವರ ಬಗ್ಗೆ ಕಡಿಮೆ ಹೇಳಿದಂತೆಯೇ.

ವೈಯಕ್ತಿಕವಾಗಿ ನನಗೆ ಅಮೇರಿಕಕ್ಕೆ ಬರುವ ಹಾಗೆ ಮಾಡಿದ್ದು ಅವರೇ. ಸುಮ್ಮನೆ ಸೋಮಾರಿಯಾಗಿ ಕೂರಬೇಡ ಎದ್ದು ಕೆಲಸ ಮಾಡು ಎಂದು ಹೇಳಿದ್ದೇ ಅವರು. ನನ್ನ ವ್ಯಾಸಂಗ ಸಮಯದಲ್ಲಿ ವಾರಕ್ಕೊಮ್ಮೆಯಾದರೂ ಕರೆ ಕೊಟ್ಟು ನನ್ನ ಓದಿನ ಬಗ್ಗೆ ನಿಗಾ ವಹಿಸುತ್ತಿದ್ದರು. ಉದ್ಯೋಗವನ್ನು ಆರಿಸುವ ಕಾಲ ಬಂದಾಗ ಅವರ ಬಳಿಯಲ್ಲಿ ನಾನಿರಬೇಕೆಂದು ಒತ್ತಾಯಿಸಿದರು. ಇದರಿಂದ ನನಗೆ ಒಳಿತೇ ಆಯಿತು. ಅವರ ಇನ್ನೂ ನಿಕಟ ಸಂಪರ್ಕವುಂಟಾಗಿ ನನಗೆ ತಂದೆಯಂತೆ ಕಂಡರು.

ನಮ್ಮ ತಂದೆಯವರ ಮತ್ತು ನಮ್ಮ ಅಂಕಲ್ ಅವರ ನಡುವೆ ಅಪಾರ ಸ್ನೇಹ. ನಮ್ಮ ತಂದೆ ಅವರಿಗೆ ' ನೀನಿದ್ದೀಯೆಂದೇ ನಾನು ಇವನನ್ನು ಅಮೇರಿಕಕ್ಕೆ ಧೈರ್ಯವಾಗಿ ಕಳಿಸುತ್ತಿರುವುದು ' ಎಂದು ಹೇಳಿದ್ದರು.

ನಾನು ಭಾರತಕ್ಕೆ ಮರಳುವ ವಿಷಯವನ್ನು ಹೇಳಿದಾಗ ಅಂಕಲ್-ರಿಗೆ ಅದು ಹೆಚ್ಚು ಇಷ್ಟವಾಗಲಿಲ್ಲ ಎಂದನಿಸುತ್ತದೆ. ಆದರೆ ಅದನ್ನು ಹೊರಗೆ ವ್ಯಕ್ತಪಡಿಸಲಿಲ್ಲ. ಒಳ್ಳೆಯ ಆಶೀರ್ವಾದ ಮಾಡಿಯೇ ನನ್ನನ್ನು ನನ್ನ ಹೆಂಡತಿಯನ್ನೂ ಅಲ್ಲಿಂದ ಕಳಿಸಿದ್ದು. ಆಗಲೇ ಅವರನ್ನು ಕೊನೆಯ ಬಾರಿ ನೋಡುತ್ತೇನೆ ಎಂದು ಎಣಿಸಿರಲಿಲ್ಲ. ನಮ್ಮ ಹಳ್ಲಿಗೆ ಒಮ್ಮೆಯಾದರೂ ಬಂದಾರು ಎನ್ನುವುದು ನನ್ನ ಆಸೆಯಾಗಿತ್ತು. ಅವರ ಕೆಲಸದ ನಡುವೆ ಈಚೆಗೆ ಹೆಚ್ಚು ಸಲ ಭಾರತಕ್ಕೆ ಬಂದಿರಲಿಲ್ಲ. ನಾನು ಮರಳಿದ ಮೇಲೆ ಆಂಕಲ್ ಬಂದರೆ ಚೆನ್ನಿರುತ್ತದೆ ಎಂಬ ಆಸೆಯಿತ್ತು. ಅದು ಆಸೆಯಾಗಿಯೇ ಉಳಿದಿದೆ.

ಭಗವಂತನು ನಮ್ಮ ಆಂಟಿ ಮತ್ತು ಅವರ ಮಕ್ಕಳಿಗೆ ಕಷ್ಟದ ಈ ಘಳಿಗೆಯಲ್ಲಿ ಶಕ್ತಿಯನ್ನು ಕೊಟ್ಟು ಕಾಪಾಡಲಿ ಎನ್ನುವುದೇ ನನ್ನ ಪ್ರಾರ್ಥನೆ. || ಸರ್ವೇ ಜನಾಃ ಸುಖಿನೋ ಭವಂತು ||

No comments: